ಮಡಿಕೇರಿ, ಮಾ. ೨೬: ರಾಜ್ಯ ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿರುವಂತೆ ರಾಜಕೀಯ ಬೆಳವಣಿಗೆಗಳು ಚುರುಕುಗೊಳ್ಳುತ್ತಿವೆ. ಈ ತನಕದ ಬಹುತೇಕ ಚುನಾವಣೆಗಳಲ್ಲಿ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳು ಯಾರೆಂಬದು ಘೋಷಣೆಯಾಗುತ್ತಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷ ಒಂದಷ್ಟು ಚುರುಕಾದಂತಿದ್ದು, ರಾಜ್ಯದಲ್ಲಿ ಒಟ್ಟು ೧೨೪ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ವೀರಾಜಪೇಟೆ ಕ್ಷೇತ್ರ ಸೇರಿರುವುದು ವಿಶೇಷವಾಗಿದೆ. ವೀರಾಜಪೇಟೆ ಕ್ಷೇತ್ರದ ಅಧಿಕೃತ ಅಭ್ಯರ್ಥಿಯನ್ನಾಗಿ ನಿರೀಕ್ಷೆಯಂತೆ ಎ.ಎಸ್. ಪೊನ್ನಣ್ಣ ಅವರೇ ಘೋಷಿಸಲ್ಪಟ್ಟಿದ್ದಾರೆ. ಈ ಕ್ಷೇತ್ರಕ್ಕೆ ಪೊನ್ನಣ್ಣ ಹಾಗೂ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಅವರುಗಳು ಆಕಾಂಕ್ಷಿಗಳಾಗಿದ್ದರು. ಇದೀಗ ಪೊನ್ನಣ್ಣ ಹೆಸರು ಅಧಿಕೃತವಾಗಿ ಕೆಪಿಸಿಸಿ ಮೂಲಕ ಪ್ರಕಟಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿನ ರಾಜಕೀಯ ಚಟುವಟಿಕೆಗಳು ಇನ್ನಷ್ಟು ಬಿರುಸುಗೊಳ್ಳುತ್ತಿವೆ. ಆದರೆ ಮೊದಲ ಪಟ್ಟಿಯಲ್ಲಿ ಮಡಿಕೇರಿ ಕ್ಷೇತ್ರದ ‘ಕೈ’ ಅಭ್ಯರ್ಥಿ ಯಾರೆಂಬದು ಘೋಷಿಸಲ್ಪಟ್ಟಿಲ್ಲ. ವೀರಾಜಪೇಟೆಗೆ ಹೋಲಿಸಿದರೆ ಕಾಂಗ್ರೆಸ್‌ನಲ್ಲಿ ಹೆಚ್ಚು ಆಕಾಂಕ್ಷಿಗಳು ಇರುವದು ಮಡಿಕೇರಿ ಕ್ಷೇತ್ರದಲ್ಲಾಗಿದೆ. ಇಲ್ಲಿ ನಾಲ್ಕೆöÊದು ಮಂದಿ ಪ್ರಬಲವಾಗಿ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಇಲ್ಲಿನ ಅಭ್ಯರ್ಥಿ ಯಾರೆಂಬ ಕುತೂಹಲ ಮುಂದುವರಿದಿದೆ.
ಕೊಡಗಿನ ಮಟ್ಟಿಗೆ ಗಮನಿಸುವದಾದರೆ ಈ ತನಕದ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಯಾರೆಂಬದು ಕಾಂಗ್ರೆಸ್ ಪಕ್ಷಕ್ಕಿಂತಲೂ ಮುಂಚಿತವಾಗಿ ಖಾತರಿಯಾಗುತ್ತಿತ್ತು. ಆದರೆ ಈ ಬಾರಿ ಬಿಜೆಪಿಗಿಂತ ಮುಂಚಿತವಾಗಿ ರಾಜ್ಯದಲ್ಲಿ ಹೆಚ್ಚು ಗಮನ ಸೆಳೆದಿರುವ ಕ್ಷೇತ್ರಗಳಲ್ಲಿ ಒಂದಾಗಿರುವ ವೀರಾಜಪೇಟೆಗೆ ಕಾಂಗ್ರೆಸ್ ಮೊದಲೇ ಅಭ್ಯರ್ಥಿಯ ಘೋಷಣೆ ಮಾಡಿದೆ. ಇದೀಗ ಪೊನ್ನಣ್ಣ ಅವರಿಗೆ ಈ ಕ್ಷೇತ್ರದಿಂದ ಪ್ರತಿಸ್ಪರ್ಧಿ ಯಾರಾಗಲಿದ್ದಾರೆ ಎಂಬ ಕೌತುಕ ಸೃಷ್ಟಿಯಾಗಿದೆ.
ವೀರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ವಿಚಾರ ಹೆಚ್ಚು ಮಹತ್ವ ಪಡೆದಿಲ್ಲ ಎಂಬದು ಸ್ಪಷ್ಟ. ಆದರೆ ಬಿಜೆಪಿಯಲ್ಲಿನ ಅಭ್ಯರ್ಥಿಯಾರಾಗಲಿದ್ದಾರೆ ಎಂಬ ಬಿಸಿ ಬಿಸಿ ಚರ್ಚೆಗಳು ಇದೀಗ ಬಿರುಸುಗೊಳ್ಳುತ್ತಿದೆ. ಹಾಲಿ ಶಾಸಕರಾಗಿರುವ ಬಿಜೆಪಿಯಲ್ಲಿನ ಪ್ರಭಾವಿ ಶಾಸಕ ಕೆ.ಜಿ. ಬೋಪಯ್ಯ ಅವರಿಗೇ ಪಕ್ಷ ಮಣೆ ಹಾಕಲಿದೆಯೇ ಅಥವಾ ಹೊಸ ಮುಖದತ್ತ ಚಿಂತನೆ ಮಾಡಲಿದೆಯೇ ಎಂಬ ಪ್ರಶ್ನೆ ಮೂಡಿದೆ. ರಾಜಕೀಯ ನೆಲೆಗಟ್ಟಿನಲ್ಲಿ ಒಂದು ಪಕ್ಷದ ಅಭ್ಯರ್ಥಿ ಯಾರೆಂಬದರ ಮೇಲೆ ಮತ್ತೊಂದು ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರ ಮಾಡುವುದು ಸಹಜವಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಸ್ತುತ ಕಾಂಗ್ರೆಸ್‌ನ ಮೂಲಕ ಒಂದಷ್ಟು ಪ್ರಭಾವಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಹೊಸಮುಖದವರೂ ಆದ ಎ.ಎಸ್. ಪೊನ್ನಣ್ಣ ಎದುರು ಬಿಜೆಪಿಯಿಂದ ಕಣಕ್ಕಿಳಿಯುವುದು ಯಾರು ಎಂಬ ಪ್ರಶ್ನೆ ಕೇವಲ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರವಲ್ಲ ಬಿಜೆಪಿ, ಜೆಡಿಎಸ್ ಸೇರಿದಂತೆ ಇಡೀ ಜಿಲ್ಲೆಯ ಜನತೆಯಲ್ಲಿ ಕುತೂಹಲ ಮೂಡಿಸಿದೆ.
ಪೊನ್ನಣ್ಣ ಹೆಸರು ಪ್ರಕಟವಾದ ಬಳಿಕ ಮಡಿಕೇರಿ ಕ್ಷೇತ್ರವೂ ಚರ್ಚೆಗೆ ಗ್ರಾಸವಾಗಿದೆ. ಇಲ್ಲಿಯೂ ಹಲವಷ್ಟು ರಾಜಕೀಯ ಲೆಕ್ಕಾಚಾರಗಳಿವೆ. ಈ ಕ್ಷೇತ್ರದಲ್ಲಿನ ಅಭ್ಯರ್ಥಿಗಳು ಯಾರು ಎಂಬದರ ಪರಿಣಾಮ ವೀರಾಜಪೇಟೆ ಕ್ಷೇತ್ರದ ಮೇಲೂ ಒಂದಷ್ಟು ಮಹತ್ವ ಪಡೆಯಲಿರುವದೂ ಇದಕ್ಕೆ ಕಾರಣವಾಗಿದೆ. ಸದ್ಯದ ಮಟ್ಟಿಗೆ ಮಡಿಕೇರಿ ಕ್ಷೇತ್ರದಲ್ಲಿ ಬಿ.ಎ. ಜೀವಿಜಯ, ಮಂಥರ್‌ಗೌಡ ಹಾಗೂ ಚಂದ್ರಮೌಳಿ ಹೆಸರು ಕಾಂಗ್ರೆಸ್‌ನಿAದ ಕೇಳಿಬರುತ್ತಿದೆ.
-ಶಶಿ ಸೋಮಯ್ಯ