ಕೂಡಿಗೆ, ಮಾ. ೨೭: ಕೂಡಿಗೆಯ ಕಾವೇರಿ-ಹಾರಂಗಿ ನದಿಗಳ ಸಂಗಮ ಸ್ಥಳದಲ್ಲಿ ಬೀಡುಬಿಟ್ಟಿರುವ ಮಂಗಗಳು ಕಳೆದ ಒಂದು ವಾರದಿಂದ ಸಂಗಮದ ಹತ್ತಿರದಿಂದ ಕೂಡಿಗೆ ಸರ್ಕಲ್ ಹತ್ತಿರ ಮನೆಗಳಿಗೆ ಮತ್ತು ಸರ್ಕಲ್ ಹತ್ತಿರದ ಹತ್ತಾರು ಅಂಗಡಿ ಮತ್ತು ಬೇಕರಿಗಳಿಗೆ ನುಗ್ಗಿ ತಿಂಡಿಗಳನ್ನು ತಿನ್ನುವುದರ ಜೊತೆಗೆ ಅನೇಕ ಮಂದಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಕಚ್ಚಿರುವ ಘಟನೆಗಳು ನಡೆದಿವೆ.
ಕಳೆದ ಎರಡು ದಿನಗಳಲ್ಲಿ ಕೂಡಿಗೆ ಸರ್ಕಲ್ನಲ್ಲಿ ಸೋಮವಾರಪೇಟೆ, ಹಾಸನ ಕಡೆಗೆ ತೆರಳಲು ಕುಳಿತ್ತಿದ್ದ ಪ್ರಯಾಣಿಕರ ಮೇಲೆ ರಂಪಾಟ ಮಾಡಿ ಅವರ ಬ್ಯಾಗ್ಗಳನ್ನು ಚೆಲ್ಲಾಪಿಲ್ಲಿ ಮಾಡಿ ಅವರಿಗೂ ಕಚ್ಚಿದ ಘಟನೆ ನಡೆದಿದೆ. ಈ ಭಾಗದಲ್ಲಿ ಈ ರೀತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಒಂದು ಮಂಗನನ್ನು ಹಿಡಿಯಲಾಗಿದೆ. ಆದರೆ ಇನ್ನೂ ಎರಡು ಗಂಡು ಮಂಗಗಳು ಭಾರೀ ತೊಂದರೆ ಉಂಟುಮಾಡುತ್ತಿವೆ ಎಂದು ಕೂಡಿಗೆ ವ್ಯಾಪ್ತಿಯ ಸಾರ್ವಜನಿಕರು ಸಂಬAಧಿಸಿದ ಅಧಿಕಾರಿ ವರ್ಗದವರಿಗೆ ತಿಳಿಸಿದ್ದಾರೆ.
ಆದರೂ ಇದುವರೆಗೂ ಯಾವುದೇ ಪ್ರಯೋಜನ ಆಗದೆ ಮಂಗಗಳ ರಂಪಾಟ ಇಂದು ಸಹ ಮುಂದುವರಿದಿದೆ. ಇಂದು ಕೂಡಿಗೆ ಸರ್ಕಲ್ನಲ್ಲಿ ಬಸ್ಗಾಗಿ ಕಾಯುತ್ತಿದ್ದ ಮಹಿಳೆಗೆ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ. ಗಾಯಗೊಂಡ ಮಹಿಳೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಅರಣ್ಯ ಇಲಾಖೆ ಯವರು ಈ ಎರಡೂ ಮಂಗಗಳನ್ನು ಹಿಡಿದು ಬೇರೆಡೆಗೆ ಬಿಡುವಂತೆ ಸಾರ್ವಜನಿಕರ ಒತ್ತಾಯಿಸಿದ್ದಾರೆ.