ಪೊನ್ನಂಪೇಟೆ, ಮಾ. ೨೬: ತಲೆ ಸುತ್ತು ಬಂದು ಆಕಸ್ಮಿಕವಾಗಿ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಚಿಕಿತ್ಸೆ ಫಲಕಾರಿಯಾಗದೆ ಉಪನ್ಯಾಸಕಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ವೀರಾಜಪೇಟೆ ತಾಲೂಕಿನ ಕಡಂಗಮರೂರು ಗ್ರಾಮದ ಬಲ್ಯಂಡ ತಿಮ್ಮಯ್ಯ ಅವರ ಪತ್ನಿ ಡಾ. ಲೆಫ್ಟಿನೆಂಟ್ ಎಸ್.ಎನ್ ಬೀನಾ (೫೨-ತಾಮನೆ: ಸಣ್ಣುವಂಡ) ಮೃತ ದುರ್ದೈವಿ.

ದೇವಣಗೇರಿಯಲ್ಲಿರುವ ಇವರ ತವರುಮನೆಯಲ್ಲಿ ಇಂದು ಬೆಳಿಗ್ಗೆ ಘಟನೆ ನಡೆದಿದ್ದು, ಚಿಕಿತ್ಸೆಗೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರು ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತç ಉಪನ್ಯಾಸಕಿ ಹಾಗೂ ಎನ್‌ಸಿಸಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆ ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿಯೂ ಉಪನ್ಯಾಸಕಿಯಾಗಿ ಹಾಗೂ ಎನ್‌ಸಿಸಿ ಅಧಿಕಾರಿಯಾಗಿ ಹಲವು ವರ್ಷ ಕಾರ್ಯನಿರ್ವಹಿಸಿ, ವೀರಾಜಪೇಟೆಗೆ ವರ್ಗಾವಣೆ ಆಗಿದ್ದರು. ಮೃತರ ಅಂತ್ಯಕ್ರಿಯೆ ತಾ. ೨೭ ರಂದು (ಇಂದು) ಕಡಂಗ ಮರೂರುವಿನಲ್ಲಿ ನಡೆಯಲಿದೆ.