ಮಡಿಕೇರಿ, ಮಾ. ೨೪: ಮಂಡ್ಯದ ಎಕ್ಸ್ಪ್ರೆಸ್ ವೇ ಬಳಿಯ ಚನ್ನೇಗೌಡನ ದೊಡ್ಡಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ತಾಯಿ, ಮಗ ಅಸುನೀಗಿದ್ದು, ಕಾರು ಚಲಾಯಿಸುತ್ತಿದ್ದ ಕುಟುಂಬದ ಮುಖ್ಯಸ್ಥ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿದ್ದ ಮೂಲತಃ ಜಿಲ್ಲೆಯ ಬಲಂಬೇರಿಯ ನಿವಾಸಿ ಕವಿತಾ (೪೫), ಆರ್ಯನ್ (೧೫) ಮೃತಪಟ್ಟ ತಾಯಿ, ಮಗ. ಕಾರು ಚಲಾಯಿಸುತ್ತಿದ್ದ ಕವಿತಾ ಅವರ ಪತಿ ಚೆಯ್ಯಂಡ ಕಟ್ಟಿ ಮುತ್ತಪ್ಪ ಪ್ರಾಣಾಪಾಯದಿಂದ ಪಾರಾಗಿದ್ದು, ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯುಗಾದಿ ಆಚರಣೆ ಹಾಗೂ ನಾಪೋಕ್ಲುವಿನಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ವೀಕ್ಷಣೆಗೆಂದು ಬಂದಿದ್ದ ಕುಟುಂಬ ಬೆಂಗಳೂರಿಗೆ ತಮ್ಮ ಸ್ವಿಫ್ಟ್ ಕಾರಿನಲ್ಲಿ (ಕೆಎ.೪೧.ಝೆಡ್. ೪೬೬೧) ಮರಳುವ ಸಂದರ್ಭ ಬೆಂಗಳೂರು-ಮೈಸೂರು ಹೆದ್ದಾರಿ ನಡುವಿನ ಮಂಡ್ಯ ಬಳಿ ಮಧ್ಯಾಹ್ನ ೨.೨೦ಕ್ಕೆ ಅಪಘಾತ ಸಂಭವಿಸಿದೆ.

ಕಾರಿನ ಮುಂಭಾಗದಲ್ಲಿ ಸಾಗುತ್ತಿದ್ದ ಟಾಟಾ ಏಸ್ ವಾಹನ ದಿಢೀರ್ ನಿಧಾನ ಮಾಡಿದ ಹಿನ್ನೆಲೆ ನಿಯಂತ್ರಣ ಸಿಗದ ಕಾರು ಮುಂಭಾಗದಲ್ಲಿದ್ದ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಒಂದೆ ಕುಟುಂಬದ ಮೂವರಿಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲಿ ಆರ್ಯನ್ ಮೃತನಾದರೆ. ಸ್ಥಳೀಯರ ಸಹಕಾರದಿಂದ ಉಳಿದ ಈರ್ವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮಾರ್ಗಮಧ್ಯೆ ಕವಿತಾ ಅಸುನೀಗಿದ್ದಾರೆ.

(ಮೊದಲ ಪುಟದಿಂದ) ಅಪಘಾತದಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಟ್ಟಿ ಮುತ್ತಪ್ಪ ಅವರ ಎದೆ, ತಲೆ ಭಾಗಕ್ಕೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ತಾ. ೨೫ ರಂದು (ಇಂದು) ಬಲಂಬೇರಿಯಲ್ಲಿ ಮೃತರ ಅಂತ್ಯಸAಸ್ಕಾರ ನಡೆಯಲಿದೆ. ಮಂಡ್ಯ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚೆಯ್ಯಂಡ ಹರೀಶ್ ತಿಮ್ಮಯ್ಯ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಕಟ್ಟಿ ಮುತ್ತಪ್ಪ ಅವರ ಪುತ್ರಿ ದೀಕ್ಷಾ ಶೈಕ್ಷಣಿಕ ಕಾರಣದಿಂದ ಜಿಲ್ಲೆಗೆ ಬಾರದೆ ಬೆಂಗಳೂರಿನಲ್ಲಿ ಉಳಿದು ಕೊಂಡಿದ್ದಳು.

ಹಾಕಿ ನಮ್ಮೆಯಲ್ಲಿ ಪಾಲ್ಗೊಂಡಿದ್ದ ಕುಟುಂಬ

ಕುಟುಂಬ ಸದಸ್ಯರು ಯುಗಾದಿ ಹಬ್ಬ ಮುಗಿಸಿ, ತಾ. ೨೩ ರಂದು ನಡೆದ ಕೊಡವ ಕೌಟುಂಬಿಕ ಹಾಕಿ ನಮ್ಮೆಯಲ್ಲಿ ಚೆಯ್ಯಂಡ ಕುಟುಂಬವನ್ನು ಬೆಂಬಲಿಸಿ ಬಲಂಬೇರಿಯಲ್ಲಿ ಉಳಿದು ತಾ. ೨೪ ರಂದು ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿದ್ದರು.

೨ ದಿನಗಳು ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತ ರೊಡನೆ ಖುಷಿ ಖುಷಿಯಾಗಿದ್ದ ಕುಟುಂಬ ವಿಧಿಯಾಟಕ್ಕೆ ಬಲಿಯಾಗಿದೆ. ಕಟ್ಟಿ ಮುತ್ತಪ್ಪ ಬೆಂಗಳೂರಿನ ಎಸ್ಕಾರ್ಟ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಮಡಿಕೇರಿಯ ಚೆಯ್ಯಂಡ ಸತ್ಯ ಅವರು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದು, ಅಪಘಾತದ ವಿಷಯ ತಿಳಿದು ಬೆಂಗಳೂರಿನಲ್ಲಿದ್ದ ಕಟ್ಟಿ ಅವರ ಪುತ್ರಿಯನ್ನು ಮಂಡ್ಯಕ್ಕೆ ಕರೆ ತಂದಿದ್ದಾರೆ.