ನವದೆಹಲಿ, ಮಾ. ೨೪: ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ಅಪರಾಧಿ ಎಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.

ಮೋದಿ ಸಮುದಾಯಕ್ಕೆ ಅವಮಾನಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯ ನಿನ್ನೆ ದಿನ ಎರಡು ವರ್ಷಗಳ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ರಾಹುಲ್ ಗಾಂಧಿ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಈ ಹಿಂದೆ ಕೇರಳದ ವಯನಾಡು ಕ್ಷೇತ್ರದಿಂದ ಆಯ್ಕೆಗೊಂಡು ಲೋಕಸಭಾ ಸದಸ್ಯ ಸ್ಥಾನ ಹೊಂದಿದ್ದು, ಇದೀಗ ಅಪರಾಧಿ ಸ್ಥಾನದಲ್ಲಿರುವ ರಾಹುಲ್ ಗಾಂಧಿ ಅವರನ್ನು ಆ ಸ್ಥಾನದಿಂದ ಅನರ್ಹಗೊಳಿಸಿ ಲೋಕಸಭಾ ಕಾರ್ಯದರ್ಶಿ ಉತ್ಪಲ್ ಕುಮಾರ್ ಇಂದು ಆದೇಶ ಹೊರಡಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಕಷ್ಟು ಕಳ್ಳರ ಹೆಸರಿನ ಮುಂದೆ ಮೋದಿ ಎಂದು ಏಕೆ ಇದೆ ಎಂದು ಅವರು ಪ್ರಶ್ನಿಸಿ ವಿವಾದ ಸೃಷ್ಟಿಸಿದ್ದರು. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಇವರೆಲ್ಲರ ಉಪನಾಮ ಒಂದೇ ಆಗಿದ್ದು, ದೇಶವನ್ನು ಲೂಟಿ ಮಾಡಿದ್ದಾರೆ ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹರಿಹಾಯ್ದಿದ್ದರು.

ಈ ಹೇಳಿಕೆಯನ್ನು ಆಧರಿಸಿ ಬಿಜೆಪಿ ಶಾಸಕ ಮತ್ತು ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ಕ್ರಿಮಿನಲ್ ಮಾನಹಾನಿ ದೂರು ದಾಖಲಿಸಿದ್ದರು. ಇತ್ತೀಚೆಗೆ ದೇಶಾದ್ಯಂತ ಸಂಚರಿಸಿ ಕಾಂಗ್ರೆಸ್ ಪರವಾಗಿ ಜೋಡೋ ಯಾತ್ರೆ ಕೈಗೊಂಡು ರಾಹುಲ್ ಗಾಂಧಿ ಪೂರ್ಣಗೊಳಿಸಿದ್ದು, ಅದಾಗಿ ಕೆÀಲವೇ ದಿನಗಳ ಬಳಿಕ ಈ ವ್ಯತಿರಿಕ್ತ ಬೆಳವಣಿಗೆ ಕಂಡುಬAದಿದೆ.