ಸೋಮವಾರ ಪೇಟೆ, ಮಾ. ೨೪: ಕಳೆದ ಜನವರಿ ೩೧ ರಂದು ಸಂಜೆ ೭.೩೦ರ ಸುಮಾರಿಗೆ ಸಿದ್ದಲಿಂಗಪುರದ ಮುಖ್ಯರಸ್ತೆಯಲ್ಲಿ ಸಾವಿಗೀಡಾದ ಆಟೋ ಚಾಲಕ ಭಾನುಮೂರ್ತಿ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೃತರ ಸಂಬAಧಿಕರು, ಜನವರಿ ೩೧ರ ಸಂಜೆ ಆಟೋ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ ಹಿನ್ನೆಲೆ ಆಟೋ ಚಾಲಕ ಭಾನುಮೂರ್ತಿ ಸಾವನ್ನಪ್ಪಿದ್ದಾನೆ ಎಂದು ಸುದ್ದಿ ಹಬ್ಬಿಸಲಾಗಿದೆ. ಆದರೆ ಅಪಘಾತದ ಸ್ಥಳವನ್ನು ಪರಿಶೀಲಿಸಿದರೆ ಇದೊಂದು ಹತ್ಯೆ ಎಂಬ ಅನುಮಾನ ಮೂಡುವಂತಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ತನ್ನ ಅಣ್ಣನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದರೂ ಈವರೆಗೆ ಯಾವುದೇ ತನಿಖೆ ನಡೆಸಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯನ್ನೂ ನೀಡುತ್ತಿಲ್ಲ ಎಂದು ದೂರಿದರು.

ಘಟನೆಯ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳು ಮುಂದಾಗುವ ಮೂಲಕ ಬಡ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಮುಂದಿನ ದಿನಗಳಲ್ಲಿ ದಲಿತಪರ ಸಂಘಟನೆಗಳ ಸಹಕಾರದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಮೃತರ ಸಹೋದರಿ ಭವಾನಿ ಹೇಳಿದರು.

ಗೋಷ್ಠಿಯಲ್ಲಿ ಮೃತ ಭಾನುಮೂರ್ತಿ ಅವರ ತಾಯಿ ಶಿವಮ್ಮ, ತಂದೆ ಚಂದ್ರ, ಸಂಬAಧಿ ಕುಳ್ಳಯ್ಯ ಅವರುಗಳು ಉಪಸ್ಥಿತರಿದ್ದರು.