ಪಾಲಿಬೆಟ್ಟ, ಮಾ. ೨೪: ಚೆನ್ನಯ್ಯಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. ೪೨ ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.

ಚೆನ್ನಯ್ಯನಕೋಟೆ ವ್ಯಾಪ್ತಿಯ ಕೋಟೆ ಪೈಸಾರಿ ಸೇರಿದಂತೆ ವಿವಿಧ ಭಾಗಗಳಲ್ಲಿ ಕಾಂಕ್ರಿಟ್ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ನಡೆಯುತ್ತಿರುವ ಕಾಮಗಾರಿ ಗುಣಮಟ್ಟವನ್ನು ಗ್ರಾಮಸ್ಥರು ಪರಿಶೀಲಿಸಬೇಕೆಂದು ಹೇಳಿದರು.

ನಂತರ ಚೆನ್ನಯ್ಯನಕೋಟೆ ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಕೆರೆ ಅಭಿವೃದ್ಧಿ ಸಮಿತಿ ಸದಸ್ಯ ರತೀಶ್ ಕುಮಾರ್, ಗ್ರಾಮದ ಕೆರೆಯನ್ನು ಶುಚಿತ್ವವಾಗಿ ನಿರ್ವಹಿಸಲು ಶಾಸಕರು ನೀಡಿದ ಪ್ರೋತ್ಸಾಹ ಮತ್ತು ಮಾರ್ಗದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹೊಸೊಕ್ಲು ಹರೀಶ್ ಕಾರ್ಯಪ್ಪ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ರಾಣಿ ನಾರಾಯಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಜಿತ್ ಕರುಂಬಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಎನ್. ವಿಜು, ಅಪ್ಪಾಜಿ ಸೇರಿದಂತೆ ಸಾರ್ವಜನಿಕರು ಇದ್ದರು. ಇದಕ್ಕೂ ಮೊದಲು ಚೆನ್ನಯ್ಯಕೋಟೆ ಮಹಿಳಾ ಸಂಘಕ್ಕೆ ಶಾಸಕರು ೩೦ ಕುರ್ಚಿ ಮತ್ತು ೧ ಟೇಬಲನ್ನು ಕೊಡುಗೆಯಾಗಿ ನೀಡಿದರು.