ಹೊದ್ದೂರು ಗ್ರಾಮ ಸಭೆ

ಹೊದ್ದೂರು, ಮಾ. ೨೪: ಹೊದ್ದೂರು ಗ್ರಾಮಸ್ಥರಿಗೆ ಪ್ರತಿದಿನವೂ ಕನಿಷ್ಟ ೮ ರಿಂದ ೧೦ ಗಂಟೆಗಳ ಕಾಲ ತಡೆರಹಿತ ವಿದ್ಯುತ್ ಸರಬರಾಜು ಮಾಡಬೇಕು. ಮೂರ್ನಾಡಿನಿಂದ ಹೊದ್ದೂರಿಗೆ ಮಂಜೂರಾದ ನೂತನ ವಿದ್ಯುತ್ ಫೀಡರ್ ಕಾಮಗಾರಿಯನ್ನು ಕೂಡಲೇ ಕೈಗೊಳ್ಳಬೇಕು ಎಂದು ಹೊದ್ದೂರು ಪಂಚಾಯಿತಿ ವ್ಯಾಪ್ತಿಯ ವಿದ್ಯುತ್ ಬಳಕೆದಾರರ ಸಂಘ ಆಗ್ರಹಿಸಿದೆ. ಹೊದ್ದೂರು ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಬಳಕೆದಾರರ ಅಧ್ಯಕ್ಷ ಕೂಡಂಡ ರವಿ ಈ ಬಗ್ಗೆ ಮಾತನಾಡಿದರು.

ವ್ಯಾಸಂಗಕ್ಕೆ ತೊಡಕಾದ ವಿದ್ಯುತ್

ಇದು ಪರೀಕ್ಷಾ ಸಮಯ. ಪ್ರತಿದಿನ ಕನಿಷ್ಟಪಕ್ಷ ಬೆಳಗ್ಗಿನ ಜಾವ ೫ ರಿಂದ ೮, ಸಂಜೆ ೬ ರಿಂದ ೧೧ ಗಂಟೆವರೆಗೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ‘ತಡೆರಹಿತ’ ವಿದ್ಯುತ್ ನೀಡುವಂತೆ ರವಿ ಆಗ್ರಹಿಸಿದರು. ಪ್ರತಿ ದಿನವೂ ೧೦ ಗಂಟೆಗಳನ್ನು ವಿದ್ಯುತ್ ಸಮಸ್ಯೆಗಳ ಪರಿಹಾರ ದುರಸ್ತಿಗಾಗಿ ಬಳಸಿಕೊಳ್ಳಿ. ಉಳಿದ ಸಮಯದಲ್ಲಿ ಗ್ರಾಮಸ್ಥರಿಗೆ ಕಡ್ಡಾಯವಾಗಿ ವಿದ್ಯುತ್ ನೀಡಬೇಕೆಂದು ಬಳಕೆದಾರರ ಪರವಾಗಿ ಅವರು ಒತ್ತಾಯಿಸಿದರು.

ಕನಿಷ್ಟ ಶುಲ್ಕ ಪಾವತಿ ಇಲ್ಲ

ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯುತ್ ಬಳಕೆದಾರರಿಗೆ ಪ್ರತಿದಿನವೂ ಕನಿಷ್ಟ ೧೪ ಗಂಟೆಗಳ ಕಾಲ ತಡೆ ರಹಿತವಾಗಿ ವಿದ್ಯುತ್ ನೀಡಬೇಕು ಇಲ್ಲವಾದಲ್ಲಿ ಮಾಸಿಕ ಮಾರ್ಗ ಕನಿಷ್ಟ ಶುಲ್ಕವನ್ನು ಬಳಕೆದಾರರು ಪಾವತಿಸುವುದು ಅಸಾಧ್ಯ ಎಂದು ರವಿ ಸಂಬAಧಿತ ಸಂಸ್ಥೆಯ ಅಧಿಕಾರಿಯವರ ಗಮನಕ್ಕೆ ತಂದರು. ಮೂರ್ನಾಡು ಶಾಖಾಧಿಕಾರಿ, ಪ್ರಕಾಶ್ ಇದಕ್ಕೆ ಪ್ರತಿಕ್ರಿಯಿಸಿ, ಹೊದ್ದೂರು ಗ್ರಾಮಕ್ಕೆ ಪ್ರತ್ಯೇಕ ನೂತನ ಫೀಡರ್ ಮಂಜೂರಾಗಿದೆ. ಸದ್ಯದಲ್ಲಿಯೇ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಕಾರ್ಯಾರಂಭವಾಗಲಿದೆ. ನೂತನ ಫೀಡರ್ ಆರಂಭವಾದ ಬಳಿಕ ಸಮಸ್ಯೆ ಪರಿಹಾರವಾಗಲಿದೆ. ಕೊಡಂಬೂರಿನಲ್ಲಿ ನೂತನ ೬೬ ಕಿಲೋ ವ್ಯಾಟ್ ಪ್ರಸರಣ ವ್ಯವಸ್ಥೆ ಕಾರ್ಯ ಆರಂಭವಾದ ನಂತರ ಈ ಭಾಗದ ವಿದ್ಯುತ್ ಸಮಸ್ಯೆ ಸಂಪೂರ್ಣ ಬಗೆ ಹರಿಯುವ ಇಂಗಿತವನ್ನು ಪ್ರಕಾಶ್ ವ್ಯಕ್ತಪಡಿಸಿದರು.

ಗಿಡಕ್ಕೆ ೨೩ ರೂಪಾಯಿ !: ಮಡಿಕೇರಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಮಯೂರ್ ಮಾತನಾಡಿ, ವಾಟೆಕಾಡು ಸಸ್ಯಾಲಯದಲ್ಲಿ ವಿವಿಧ ಗಿಡಗಳನ್ನು ಬೆಳೆಸಲಾದ ವಿವರ ನೀಡಿದರು. ಈ ಬಾರಿ ಅರಣ್ಯ ಇಲಾಖೆಯು ರಿಯಾಯಿತಿ ದರದಲ್ಲಿ ನೀಡಲಾಗುತ್ತಿರುವ ಸಸಿಗಳಿಗೆ ದುಬಾರಿ ಬೆಲೆ ನಿಗದಿಪಡಿಸಲಾಗಿದೆ. ಕೇವಲ ೭ ರೂಪಾಯಿಗೆ ನೀಡಲಾಗುತ್ತಿದ್ದ ಗಿಡಕ್ಕೆ ೨೩ ರೂಪಾಯಿ ನಿಗದಿ ಪಡಿಸಿರುವ ಕ್ರಮವನ್ನು ಕೆಲವು ಬೆಳೆಗಾರರು ಖಂಡಿಸಿದರು. ಸರಕಾರ ಗಿಡಗಳ ಬೆಲೆಯನ್ನು ಇಳಿಸಿ, ಹಸಿರೀ ಕರಣಕ್ಕೆ ಪ್ರೋತ್ಸಾಹ ನೀಡಬೇಕೆಂಬ ಒತ್ತಾಯ ಸಭೆಯಲ್ಲಿ ಕೇಳಿ ಬಂತು. ಸಭಾಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷೆ ಕುಸುಮಾವತಿ ವಹಿಸಿದ್ದರು. ನೋಡಲ್ ಅಧಿಕಾರಿಯಾಗಿ ಮಡಿಕೇರಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಹೇಮಂತ್ ಪಾಲ್ಗೊಂಡಿದ್ದರು. ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಜನೋಪಯೋಗಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಉಪಾಧ್ಯಕ್ಷೆ ಸರಸು, ಪಂಚಾಯಿತಿ ಸದಸ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಸ್ವಾಗತಿಸಿ, ನಿರೂಪಿಸಿದರು. ಈ ಸಂದರ್ಭ ರಾಜ್ಯ ಪ್ರಶಸ್ತಿ ವಿಜೇತೆ ಅಂಗನವಾಡಿ ಶಿಕ್ಷಕಿ ತಂಸೀನಾ ಬಾನು ಅವರನ್ನು ಸನ್ಮಾನಿಸಲಾಯಿತು.