ಕುಶಾಲನಗರ, ಮಾ. ೨೩: ನಿಂತಿದ್ದ ಲಾರಿಗೆ ಮಾರುತಿ ಓಮಿನಿ ಕಾರು ಡಿಕ್ಕಿಯಾಗಿ ಚಾಲಕನ ಕಾಲು ಮುರಿತಕ್ಕೊಳಗಾದ ಘಟನೆ ನಡೆದಿದೆ.

ಬೆಂಗಳೂರಿನಿAದ ಪುತ್ತೂರು ಕಡೆಗೆ ತೆರಳುತ್ತಿದ್ದ ಮಾರುತಿ ಒಮಿನಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕೊಪ್ಪ ಬಳಿ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಲಾರಿಗೆ ಅಪ್ಪಳಿಸಿದೆ. ಪರಿಣಾಮ ಚಾಲಕ ಕಾರಿನೊಳಗೆ ಸಿಲುಕಿಕೊಂಡು ತೀವ್ರವಾಗಿ ಗಾಯಗೊಳ್ಳುವುದರೊಂದಿಗೆ ಎರಡು ವಾಹನಗಳಿಗೆ ಹಾನಿಯಾಗಿವೆ.

ಕಾರಿನಲ್ಲಿದ್ದ ಪುತ್ತೂರು ನಿವಾಸಿ ಹಮೀದ್ ಎಂಬವರ ಕಾಲು ಮುರಿದಿದೆ. ಇನ್ನೋರ್ವ ಸಹಚರ ಮಹಮ್ಮದ್ ಶರೀಫ್ ಅವರು ಅಲ್ಪಸ್ವಲ್ಪ ಗಾಯಗಳಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಳಗ್ಗಿನ ಜಾವ ೪ ಗಂಟೆಗೆ ಅಪಘಾತ ಸಂಭವಿಸಿದ್ದು ಆಸ್ಪತ್ರೆಗೆ ಸಾಗಿಸಲು ವಾಹನ ಲಭಿಸದೆ ಸುಮಾರು ಒಂದು ಗಂಟೆ ಕಾಲ ರಸ್ತೆ ಬದಿಯಲ್ಲಿ ನರಳುತ್ತಿದ್ದ ಗಾಯಾಳು ಬಗ್ಗೆ ಮಾಹಿತಿ ಲಭಿಸಿದ ಸ್ಥಳೀಯ ‘ಶಕ್ತಿ’ ಪ್ರತಿನಿಧಿ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಸೇರಿಸಲು ವಾಹನ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.

ಸ್ಥಳದಿಂದ ತುರ್ತು ಸಹಾಯವಾಣಿ ಸಂಖ್ಯೆ ೧೧೨ ಗೆ ಸಂಪರ್ಕಿಸಿ ಅಂಬುಲೆನ್ಸ್ ಸಹಾಯ ಕೋರಿದರೂ ಕುಶಾಲನಗರ ಸರ್ಕಾರಿ ಆಸ್ಪತ್ರೆಯ ಅಂಬುಲೆನ್ಸ್ ರಿಪೇರಿ ಆಗಿದೆ ಎನ್ನುವ ಸಂದೇಶ ಬಂದು ಯಾವುದೇ ಖಾಸಗಿ ವಾಹನಗಳು ಲಭ್ಯವಿಲ್ಲದೆ ಇದರಿಂದ ಕಾಲು ಮುರಿತಕ್ಕೆ ಒಳಗಾದ ಗಾಯಾಳು ರಸ್ತೆಯಲ್ಲಿ ಕೆಲವು ಕಾಲ ನರಳುವ ಸ್ಥಿತಿ ಎದುರಾಯಿತು.

ತೀವ್ರ ಗಾಯಗೊಂಡ ಹಮೀದ್ ಅವರನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಸ್ಥಳಾಂತರಿಸಲಾಗಿದೆ.