ಕುಶಾಲನಗರ, ಮಾ. ೨೩: ಬಳಕೆಗೆ ಯೋಗ್ಯವಲ್ಲದ ರಾಸಾಯನಿಕ ಸರಕುಗಳನ್ನು ಸಾಗಿಸುತ್ತಿದ್ದ ಲಾರಿ ಒಂದು ಬೆಂಕಿ ಅವಘಡಕ್ಕೆ ಒಳಗಾಗಿ ವಾಹನ ಸಂಪೂರ್ಣ ಭಸ್ಮವಾಗಿರುವ ಘಟನೆ ಕುಶಾಲನಗರದಲ್ಲಿ ಗುರುವಾರ ಮುಂಜಾನೆ ನಡೆದಿದೆ.

ತಮಿಳುನಾಡಿನ ಕೊಯಮತ್ತೂರಿ ನಿಂದ ಕುಶಾಲನಗರ ಮಾರ್ಗವಾಗಿ ಮಂಗಳೂರಿನ ಬೈಕಂಪಾಡಿಗೆ ಸಾಗುತ್ತಿದ್ದ ಲಾರಿ (ಟಿಎನ್೨೪ ಎಟಿ ೭೩೧೯) ಕುಶಾಲನಗರದಲ್ಲಿ ಬೆಂಕಿಗೆ ಆಹುತಿಯಾಗಿದೆ.

ಕೊಯಮತ್ತೂರಿನಿಂದ ಎರಡು ಲಾರಿಗಳಲ್ಲಿ ಸರಕು ತುಂಬಿ ಮಂಗಳೂರಿನ ಕಡೆಗೆ ಸಾಗುತ್ತಿದ್ದ ಸಂದರ್ಭ ಒಂದು ಲಾರಿಯ ಹಿಂಭಾಗದಲ್ಲಿ ಬೆಂಕಿ ಕಂಡುಬAದಿದ್ದು ಚಾಲಕ ತಕ್ಷಣ ಕುಶಾಲನಗರದ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ರಸ್ತೆ ಬದಿಯಲ್ಲಿ ವಾಹನವನ್ನು ನಿಲ್ಲಿಸಿದ್ದಾನೆ. ಬೆಂಕಿ ಕಂಡ ತಕ್ಷಣ ಲಾರಿಯಲ್ಲಿದ್ದ ದಾಖಲೆಗಳನ್ನು ತನ್ನೊಂದಿಗೆ ತೆಗೆದುಕೊಂಡು ಹೊರಬಂದು ಸ್ಥಳೀಯರಿಗೆ ಮಾಹಿತಿ ನೀಡಿದ್ದಾನೆ. ಸ್ಥಳೀಯರು ನೀರು ಮರಳು ಎಸೆದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.

ಕೂಡಲೆ ಸ್ಥಳೀಯರು ಪೊಲೀಸ್ ಠಾಣೆ ಮತ್ತು ಅಗ್ನಿಶಾಮಕ ತಂಡಕ್ಕೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ತಂಡ ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಬೆಂಕಿ ರಾಸಾಯನಿಕ ವಸ್ತುಗಳಿಗೆ ತಗಲಿ ಅಪಾಯಕಾರಿ ಪರಿಸ್ಥಿತಿ ಸೃಷ್ಟಿಯಾಗಿತ್ತು.

ತಕ್ಷಣ ಪಿರಿಯಾಪಟ್ಟಣ ಭಾಗದಿಂದ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳ ತಂಡ ಬೆಂಕಿ ಶಮನಗೊಳಿಸಲು ಪ್ರಯತ್ನಿಸಿದ್ದಾರೆ. ಮುಂಜಾನೆ ೫ ಗಂಟೆ ತನಕ ಎರಡು ಅಗ್ನಿಶಾಮಕ ವಾಹನಗಳು ಮತ್ತು ಸಿಬ್ಬಂದಿಗಳು ಸೇರಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಸ್ತೆ ಬದಿಯಲ್ಲಿದ್ದ ಕಟ್ಟಡಗಳು ಬೆಂಕಿಗೆ ಹಾನಿಯಾಗುವ ಸಾಧ್ಯತೆ ಇದ್ದು ಅದನ್ನು ಕೂಡ ತಪ್ಪಿಸುವಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಪೊಲೀಸರು ಸ್ಥಳದಲ್ಲಿದ್ದು ಹೆದ್ದಾರಿ ವಾಹನ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಟ್ಟರು.

ಲಾರಿಯ ಹಿಂಭಾಗದಲ್ಲಿ ಬೆಂಕಿ ದೃಶ್ಯ ಕಂಡು ತಕ್ಷಣ ತಾನು ಕೆಳಗೆ ಇಳಿದು ಬಂದು ಲಾರಿ ಚಾಲಕ ಕನಕ ರಾಜು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಶಾಲನಗರ ಪಟ್ಟಣ ಠಾಣೆಯ ಪೊಲೀಸರು ಮಹಜರು, ನಡೆಸಿದ್ದಾರೆ.