ಕುಶಾಲನಗರ, ಮಾ. ೨೧: ಸ್ವಚ್ಛತಾ ಅಭಿಯಾನದ ಅಡಿಯಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಕುಶಾಲನಗರ ಫೆಡರಲ್ ಬ್ಯಾಂಕ್ ಶಾಖೆ ವತಿಯಿಂದ ಕುಶಾಲನಗರ ಪುರಸಭೆಗೆ ಮಹೇಂದ್ರ ಪಿಕಪ್ ವಾಹನವನ್ನು ಕೊಡುಗೆ ನೀಡಲಾಯಿತು. ಬ್ಯಾಂಕ್ ಶಾಖೆಯ ೧೧ನೇ ವಾರ್ಷಿಕೋತ್ಸವ ಅಂಗವಾಗಿ ಸಂಸ್ಥೆಯ ಸಿಎಸ್‌ಆರ್ ಯೋಜನೆ ಅಡಿ ಸುಮಾರು ರೂ. ೮.೭೫ ಲಕ್ಷ ಮೌಲ್ಯದ ವಾಹನವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಮ್ಮುಖದಲ್ಲಿ ಆಡಳಿತ ಮಂಡಳಿಗೆ ಹಸ್ತಾಂತರಿಸ ಲಾಯಿತು.

ಈ ಸಂದರ್ಭ ನಡೆದ ಸರಳ ಸಮಾರಂಭದಲ್ಲಿ ಬ್ಯಾಂಕಿನ ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಾಸಕ ರಂಜನ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ರಂಜನ್, ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿರುವ ಫೆಡರಲ್ ಬ್ಯಾಂಕ್ ಅಧಿಕಾರಿಗಳು ಸಿಬ್ಬಂದಿಗಳ ಕೊಡುಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ಯಾಂಕಿನ ಲಾಭಾಂಶದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಇಂತಹ ಸಂಸ್ಥೆಗಳಲ್ಲಿ ಗ್ರಾಹಕರು ಹೆಚ್ಚಿನ ವಹಿವಾಟು ಮಾಡುವುದ ರೊಂದಿಗೆ ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪುರಸಭೆ ಅಧ್ಯಕ್ಷ ಬಿ. ಜಯವರ್ಧನ್ ಮಾತನಾಡಿ, ಬ್ಯಾಂಕ್ ಕೊಡುಗೆ ನೀಡಿರುವ ವಾಹನದ ಸದುಪಯೋಗ ಮಾಡುವುದಾಗಿ ತಿಳಿಸಿ, ಅಧಿಕಾರಿ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಬ್ಯಾಂಕಿನ ವಲಯ ಮುಖ್ಯಸ್ಥರಾದ ವಿ.ಸಿ. ರಾಜೀವ್ ಮತ್ತು ಶಾಖೆಯ ವ್ಯವಸ್ಥಾಪಕ ಎಂ.ಎನ್. ವಿನೋದ್ ಅವರು ಮಾತನಾಡಿ ಬ್ಯಾಂಕ್ ಚಟುವಟಿಕೆಗಳ ಬಗ್ಗೆ ಮಾಹಿತಿ ಒದಗಿಸಿದರು. ಇದೇ ಸಂದರ್ಭ ವಾಹನದ ಕೀಲಿ ಕೈಯನ್ನು ಪುರಸಭೆ ಆಡಳಿತಕ್ಕೆ ಹಸ್ತಾಂತರ ಮಾಡಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಸುರಾಯ ಬಾನು ಮುಖ್ಯ ಅಧಿಕಾರಿ ಶಿವಪ್ಪನಾಯಕ್ ಸದಸ್ಯರಾದ ಅಮೃತರಾಜ್, ಜಗದೀಶ್, ವಿ.ಎಸ್. ಆನಂದಕುಮಾರ್, ಡಿ.ಕೆ. ತಿಮ್ಮಪ್ಪ ಕೆ.ಜಿ. ಮನು, ಕುಶಾಲನಗರದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎA. ಚರಣ್ ಉದ್ಯಮಿಗಳಾದ ಜಮ್ಸಿ ಪೊನ್ನಪ್ಪ ಬ್ಯಾಂಕ್ ಸಿಬ್ಬಂದಿಗಳು ಮತ್ತು ಗ್ರಾಹಕರು ಇದ್ದರು.