ಕೂಡಿಗೆ, ಮಾ. ೨೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದಲ್ಲಿರುವ ಶ್ರೀ ಹರಕೆ ಚೌಡೇಶ್ವರಿ ದೇವಿ ಮತ್ತು ನಾಗದೇವರ ವಾರ್ಷಿಕೋತ್ಸವ ಶ್ರಧ್ದಾಭಕ್ತಿಯಿಂದ ನಡೆಯಿತು. ಬೆಳಿಗ್ಗೆ ಗಣಪತಿ ಹೋಮ, ದುರ್ಗಾಹೋಮ, ಕಲಾವೃದ್ಧಿ ಹೋಮ, ಅಭಿಷೇಕ, ಕಳಸ ಪ್ರತಿಷ್ಠೆ ಹಾಗೂ ದೇವಿಗೆ ವಿವಿಧ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ಬೈಲುಕೊಪ್ಪದ ಗಣಪತಿ ದೇವಸ್ಥಾನ ಅರ್ಚಕ ಗಣಪತಿ ತಂಡದವರು ನೆರವೇರಿಸಿದರು. ಸಂಜೆ ಕ್ಷೇತ್ರದ ಆವರಣದಲ್ಲಿ ದೀಪಾಲಂಕಾರ ಮತ್ತು ವಿಶೇಷ ಪೂಜಾ ಕಾರ್ಯಕ್ರಮ ಮತ್ತು ತೀರ್ಥ ಪ್ರಸಾದ ವಿತರಣೆ, ಮತ್ತು ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಸಿ. ರವಿ, ಕಾರ್ಯದರ್ಶಿ ಪ್ರವೀಣ್, ನಿರ್ದೇಶಕರಾದ ಕೆ.ಸಿ. ಶಿವಮೂರ್ತಿ, ಅರುಣ್ ಕುಮಾರ್, ಚಲುವೇಗೌಡ, ಪ್ರಸನ್ನ, ಸೇರಿದಂತೆ ಸಮಿತಿ ಸದಸ್ಯರು ಹಾಜರಿದ್ದರು.