ಕುಶಾಲನಗರ, ಮಾ. ೧೬: ಭಾರತೀಯ ಜನತಾ ಪಕ್ಷ ಸೇವಾ ಪ್ರಧಾನ ಪಕ್ಷವಾಗಿದ್ದು ಸಮಾಜದ ರಕ್ಷಣೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಪಕ್ಷದ ವಕ್ತಾರರು ಹಾಗೂ ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಎಸ್ ಸಿ ಮೋರ್ಚಾ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಸ್‌ಸಿ ಸಮುದಾಯವನ್ನು ಮುಖ್ಯ ವಾಹಿನಿಗೆ

(ಮೊದಲ ಪುಟದಿಂದ) ತರಲು ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿವೆ. ಕೊಡಗು ಜಿಲ್ಲೆಯಲ್ಲಿ ದಲಿತರ ಕಾಲನಿಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದರು. ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನೇ ತರುವ ನಿಟ್ಟಿನಲ್ಲಿ ಎಲ್ಲರ ಬೆಂಬಲ ಅಗತ್ಯ ಎಂದರು.

ಈ ಸಂದರ್ಭ ಮಾತನಾಡಿದ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ, ಕಾಂಗ್ರೆಸ್ ಸರ್ಕಾರದ ಸಂದರ್ಭ ಎಸ್‌ಸಿ ಸಮುದಾಯವನ್ನು ಭಯದ ವಾತಾವರಣದಲ್ಲಿ ಇರಿಸುವ ಮೂಲಕ ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದರು ಎಂದು ಹೇಳಿದರು. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ ಮಾಡುವ ಮೂಲಕ ದಲಿತರ ಶೋಷಣೆ ನಡೆದಿದೆ ಎಂದು ಆರೋಪಿಸಿದರು.

ಬಿಜೆಪಿ ಸರಕಾರ ಬಂದ ನಂತರ ಡಾ. ಅಂಬೇಡ್ಕರ್ ಅವರಿಗೆ ಹೆಚ್ಚಿನ ಗೌರವ ಸಂದಿದೆ ಎಂದರು. ಬಿಜೆಪಿ ಯಾವುದೇ ವರ್ಗಕ್ಕೆ ಸೀಮಿತ ಪಕ್ಷ ಅಲ್ಲ ಎಂದ ಕೆ.ಜಿ. ಬೋಪಯ್ಯ, ಪ್ರತಿಯೊಂದು ಸಮುದಾಯಕ್ಕೂ ಸ್ಪಂದಿಸುವ ಮೂಲಕ ಆಡಳಿತ ನಡೆಸುತ್ತಿದೆ ಎಂದರು. ಮುಂದಿನ ಚುನಾವಣೆ ಸವಾಲಿನ ಚುನಾವಣೆಯಾಗಿದ್ದು ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.

ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಬಿಜೆಪಿ ಸರಕಾರ ಬಂದ ನಂತರ ದಲಿತರಿಗೆ ಕೊಡಗು ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಅವಕಾಶ ಲಭಿಸಿದೆ. ಕೆಲವೆಡೆ ವಿಶೇಷವಾಗಿ ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಶಾಲೆಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ೬೦೦ ಕೋಟಿಗೂ ಮಿಕ್ಕಿ ಹಣವನ್ನು ಎಸ್ಸಿ ಸಮುದಾಯ ಜನಾಂಗಕ್ಕೆ ಬಳಕೆ ಮಾಡುವ ಯೋಜನೆ ರೂಪುಗೊಂಡಿದೆ ಎಂದರು.

ಅಕ್ರಮ ಸಕ್ರಮದಲ್ಲಿ ಜಿಲ್ಲೆಯಲ್ಲಿ ಹನ್ನೆರಡು ಸಾವಿರ ಜನರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಅರಣ್ಯ ಹಕ್ಕು ಸಮಿತಿಯ ಮೂಲಕ ಹಕ್ಕು ಪತ್ರ ನೀಡುವ ಸಂದರ್ಭ ಕಾಂಗ್ರೆಸ್ ಅಡ್ಡಗಾಲು ಹಾಕಿರುವುದು ಸರಿಯಲ್ಲ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ, ಪ್ರಮುಖರಾದ ಬಿ.ಬಿ. ಭಾರತೀಶ್, ಮನು ಕುಮಾರ್ ರೈ, ಕುಶಾಲನಗರ ಪುರಸಭೆ ಅಧ್ಯಕ್ಷ ಜಯವರ್ಧನ್, ಸೋಮವಾರಪೇಟೆ ಪುರಸಭೆ ಅಧ್ಯಕ್ಷ ಚಂದು, ಪ್ರಮುಖರಾದ ಪರಮಾನಂದ, ದಿವಾಕರ್, ಮಂಜುಳಾ, ಜಿಲ್ಲಾ ತಾಲೂಕು ಮತ್ತು ವಿವಿಧ ಹಂತಗಳ ಪದಾಧಿಕಾರಿಗಳು, ಪ್ರಮುಖರು ಇದ್ದರು.

ಎಸ್‌ಸಿ ಮೋರ್ಚಾದ ಜಿಲ್ಲಾ ಅಧ್ಯಕ್ಷ ಎಸ್.ಎ. ಪ್ರತಾಪ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಗೂ ಮುನ್ನ ಅತಿಥಿಗಳು ಅಂಬೇಡ್ಕರ್ ಮತ್ತು ಗಣ್ಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು. ಇದೇ ಸಂದರ್ಭ ಪಕ್ಷದ ವತಿಯಿಂದ ಎಸ್ಸಿ ಮೋರ್ಚಾದ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು

ಸಮಾರಂಭಕ್ಕೆ ಮೊದಲು ಕುಶಾಲನಗರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮುಖ್ಯ ರಸ್ತೆಯಲ್ಲಿ ಕಾರ್ಯಕರ್ತರು ಬೃಹತ್ ಮೆರವಣಿಗೆ ತೆರಳಿದರು.