ಗೋಣಿಕೊಪ್ಪಲು, ಮಾ. ೧೦: ದ.ಕೊಡಗಿನ ವಿವಿಧ ಭಾಗದಲ್ಲಿ ಮತ್ತೆ ಹುಲಿಯ ಕಾಟ ಆರಂಭವಾಗಿದ್ದು ಕಾನೂರು, ಕೋತೂರು ಭಾಗದ ರೈತರಾದ ಚೆರಿಯಂಡ ವಸಂತ ಪೂವಯ್ಯ ಅವರಿಗೆ ಸೇರಿದ ಎರಡು ಹಸುಗಳನ್ನು ಹುಲಿಯು ಕೊಂದು ಹಾಕಿದೆ. ಬಹುತೇಕ ರೈತರ ಜಾನುವಾರುಗಳು ಹುಲಿಯ ಬಾಯಿಗೆ ಆಹಾರವಾಗುತ್ತಿರುವುದರಿಂದ ರೈತರು ತಮ್ಮ ಮನೆ ಸಮೀಪ, ಕೊಟ್ಟಿಗೆ, ಭತ್ತದ ಗದ್ದೆಯಲ್ಲಿ ಕಟ್ಟಿರುವ ಜಾನುವಾರುಗಳಿಗೆ ರಕ್ಷಣೆ ಇಲ್ಲದಂತಾಗಿದೆ.

ಮುಂಜಾನೆಯ ವೇಳೆ ಜಾನುವಾರುಗಳು ಇರುವ ಸ್ಥಳಕ್ಕೆ ಆಗಮಿಸುವ ಹುಲಿಗಳು ಬೆಲೆ ಬಾಳುವ ಹಸು ಹಾಗೂ ಕರುಗಳನ್ನು ಬಲಿ ತೆಗೆದುಕೊಳ್ಳುತ್ತಿವೆ. ಕಳೆದ ಕೆಲವು ದಿನಗಳಿಂದ ದ.ಕೊಡಗಿನ ವಿವಿಧ ಭಾಗಗಳಲ್ಲಿ ಹಸುಗಳ ಮೇಲೆ ಹುಲಿಯ ದಾಳಿ ನಿರಂತರವಾಗಿ ನಡೆಯುತ್ತಿದೆ. ಇದರಿಂದ ರೈತ ಕಂಗಾಲಾಗಿದ್ದಾನೆ. ಹುಲಿಯ ಸಂಚಾರ ಅಧಿಕವಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ರೈತರು ಸಾಕಿರುವ ಜಾನುವಾರುಗಳನ್ನು ಹುಲಿಯ ಬಾಯಿಂದ ರಕ್ಷಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷರಾದ ಕಾಡ್ಯಮಾಡ ಮನುಸೋಮಯ್ಯ ಹಾಗೂ ಇತರರು ಕಾನೂರು ಭಾಗದಲ್ಲಿ ಹುಲಿ ದಾಳಿ ನಡೆದ ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದರು. ನಂತರ ಕೊಡಗು ಜಿಲ್ಲಾ ಹಿರಿಯ ಅರಣ್ಯ ಅಧಿಕಾರಿಗಳಾದ ಸಿಸಿಎಫ್ ಬಿ.ಎನ್.ಎನ್. ಮೂರ್ತಿಯವರನ್ನು, ಹುಲಿಯನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದರು.

ಹುಲಿ ದಾಳಿ ನಡೆದ ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ತಂಡ ಭೇಟಿ ನೀಡಿದೆ. ಸ್ಥಳದಲ್ಲಿ ಹುಲಿಯ ಸೆರೆಗೆ ಬೋನನ್ನು ಅಳವಡಿಸಲಾಗಿದ್ದು ಹುಲಿಯ ಚಲನವಲನದ ಬಗ್ಗೆ ಮಾಹಿತಿ ತಿಳಿಯಲು ಹಲವು ಕಡೆಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಮುಂಜಾಗೃತ ಕ್ರಮವಾಗಿ ಅರಣ್ಯ ಸಿಬ್ಬಂದಿಗಳು ಕೂಂಬಿAಗ್ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.