ಮಡಿಕೇರಿ, ಮಾ. ೧೦: ಮೂರು ವರ್ಷಗಳ ಹಿಂದೆ ಮುಂಗಾರಿನ ಅವಧಿಯಲ್ಲಿ ಕೊಡಗಿನಲ್ಲಿ ಸಂಭವಿಸಿದ ಭಾರೀ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದವರಿಗೆ ನೆಲ್ಲಿಹುದಿಕೇರಿಯ ನಲ್ವತ್ತು ಎಕರೆ ಗ್ರಾಮದಲ್ಲಿ ಪೀಪಲ್ಸ್ ಫೌಂಡೇಷನ್ ವತಿಯಿಂದ ನಿರ್ಮಿಸಲಾಗಿರುವ ೨೫ ಮನೆಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ತಾ.೧೩ ರಂದು ನಡೆಯಲಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ನ ವಲಯ ಸಂಚಾಲಕರು ಹಾಗೂ ಯೋಜನೆಯ ವಲಯ ಮೇಲ್ವಿಚಾರಕರಾದ ಯು. ಅಬ್ದುಸ್ಸಲಾಮ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮಾಅತೆ ಇಸ್ಲಾಮಿ ಹಿಂದ್ನ ಅಧೀನ ಸಂಸ್ಥೆ ಪೀಪಲ್ಸ್ ಫೌಂಡೇಶನ್ ಮೂಲಕ ಸುಮಾರು ೬ ಲಕ್ಷ ವೆಚ್ಚದ ೨೫ ಮನೆಗಳ ‘ಪೀಪಲ್ಸ್ ವಿಲೇಜ್ ಕೊಡಗು’ ವನ್ನು ಎಂ.ಕೆ. ಅಶ್ರಫ್ ಅವರ ಉಸ್ತುವಾರಿಯಲ್ಲಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಪ್ರತಿ ಮನೆ ೫೦೦ ಚದರ ಅಡಿ ವಿಸ್ತೀರ್ಣದ್ದಾಗಿದ್ದು, ೩.೫೦ ಸೆಂಟ್ಸ್ ಜಾಗವನ್ನು ಹೊಂದಿದೆ. ಈ ಮನೆಗಳನ್ನು ಜಾತಿ ಮತ ಭೇದವಿಲ್ಲದೆ ಎಲ್ಲಾ ಸಮುದಾಯಕ್ಕೆ ಸೇರಿದ, ಸಂಕಷ್ಟಕ್ಕೆ ಒಳಗಾಗಿದ್ದ ಮಂದಿಗೆ ವಿತರಿಸಲಾಗುವುದೆಂದು ಮಾಹಿತಿಯಿತ್ತರು.
ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸಿದ ಬಳಿಕವೂ ಉಳಿದಿರುವ ಜಾಗದಲ್ಲಿ ಸಮುದಾಯ ಭವನ, ಅಂಗನವಾಡಿ, ನ್ಯಾಯ ಬೆಲೆ ಅಂಗಡಿಗಳನ್ನು ನಿರ್ಮಿಸಿ ಅನುಕೂಲತೆ ಕಲಿಸಲು ಸಂಸ್ಥೆ ಉದ್ದೇಶಿಸಿದೆ ಎಂದು ಸ್ಪಷ್ಟಪಡಿಸಿದರು.
ತಾ. ೧೩ರಂದು ಸಂಜೆ ೪.೩೦ ಗಂಟೆಗೆ ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ಕೇರಳದ ಪೀಪಲ್ಸ್ ಫೌಂಡೇಶನ್ ಅಧ್ಯಕ್ಷರಾದ ಎಂ.ಕೆ.ಮುಹಮ್ಮದ್ ಅಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ೨೫ ಮನೆಗಳನ್ನು ಒಳಗೊಂಡಿರುವ “ಪೀಪಲ್ಸ್ ವಿಲೇಜ್’ನ್ನು ಸಮಾಜದ ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದರು.
ಸಭಾ ಕಾರ್ಯಕ್ರಮವನ್ನು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಉದ್ಘಾಟನೆ ಮಾಡಲಿದ್ದಾರೆ. ಶಾಸಕರುಗಳಾದ ಎಂ.ಪಿ.ಅಪ್ಪಚ್ಚು ರಂಜನ್, ಯು.ಟಿ. ಖಾದರ್, ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಸಮಾಜ ಸೇವಕ ಎ.ಎಸ್.ಪೊನ್ನಣ್ಣ, ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಬೆಳ್ಗಾಮೀ ಮುಹಮ್ಮದ್ ಸಾದ್, ಕೇರಳ ರಾಜ್ಯಾಧ್ಯಕ್ಷ ಎಂ.ಐ.ಅಬ್ದುಲ್ ಅಝೀಜ್, ಉಪಾಧ್ಯಕ್ಷರಾದ ಪಿ.ಮುಜೀರ್ರಹ್ಮಾನ್, ಕರ್ನಾಟಕ ರಾಜ್ಯ ಕಾರ್ಯದರ್ಶಿಗಳಾದ ಅಕ್ಬರ್ ಅಲಿ ಉಡುಪಿ, ‘ಶಕ್ತಿ’ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿಯಿತ್ತರು.
ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಜಮಾಅತೆ ಇಸ್ಲಾಮೀ ಹಿಂದ್ನ ಜಿಲ್ಲಾ ಸಂಚಾಲಕರಾದ ಪಿ.ಕೆ.ಅಬ್ದುಲ್ ರೆಹಮಾನ್, ಸ್ವಾಗತ ಸಮಿತಿ ಉಪಾಧ್ಯಕ್ಷರುಗಳಾದ ಎನ್.ಕೆ.ವಾಸು ಮತ್ತು ಜೋಸೆಫ್ ಶ್ಯಾಮ್, ಸದಸ್ಯರುಗಳಾದ ಬಾಬುಚಂದ್ರ ಉಳ್ಳಾಗಡ್ಡಿ, ಬೀರಾನ್ ಕುಟ್ಟಿ ಉಪಸ್ಥಿತರಿದ್ದರು.