ಮಡಿಕೇರಿ, ಮಾ. ೯: ರಾಜ್ಯದ ಒಟ್ಟು ೧೦ ಜಿಲ್ಲೆಗಳಿಗೆ ಚುನಾವಣೆ ರಾಯಭಾರಿಗಳನ್ನು ಆಯಾ ಜಿಲ್ಲೆಗಳ ಶಿಫಾರಸ್ಸಿನಂತೆ ಚುನಾವಣಾ ಆಯೋಗ ಪ್ರಕಟಿಸಿದೆ. ಕೊಡಗು ಜಿಲ್ಲೆಗೆ ಐವತ್ತೊಕ್ಕಲುವಿನ ಕೆ.ಯು. ಮುತ್ತಪ್ಪ (ರವಿ) ಅವರನ್ನು ನೇಮಕ ಮಾಡಲಾಗಿದೆ.
ವಿವಿಧ ಕ್ಷೇತ್ರಗಳ ಸಾಧಕರನ್ನು ರಾಯಭಾರಿಗಳಾಗಿ (ಐಕಾನ್) ನೇಮಿಸಲಾಗಿದ್ದು, ಮುತ್ತಪ್ಪ ಅವರನ್ನು ಸಾಮಾಜಿಕ ಕ್ಷೇತ್ರದಿಂದ ಪರಿಗಣಿಸಲಾಗಿದೆ. ಚುನಾವಣೆ ಸಂದರ್ಭ ಮತದಾರರಲ್ಲಿ ಜಾಗೃತಿ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಇವರು ತೊಡಗಿಸಿಕೊಳ್ಳಲಿದ್ದಾರೆ.
ಕಳೆದ ಹಲವು ವರ್ಷಗಳಿಂದ ಗೃಹರಕ್ಷಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ಪ್ರವಾಹ ಸಂದರ್ಭಗಳಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ೭೦ ಜನರ ಪ್ರಾಣರಕ್ಷಣೆಯೊಂದಿಗೆ ನದಿ-ಕೆರೆಗಳಿಂದ ೩೮ ಮೃತದೇಹಗಳನ್ನು ಇವರು ಹೊರ ತೆಗೆದಿದ್ದಾರೆ.