ಶನಿವಾರಸಂತೆ, ಮಾ. ೭: ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ನಡೆದ ೨೦೨೨-೨೩ ನೇ ಸಾಲಿನ ಹಸಿಮೀನು ಮಾರಾಟ ಮರುಹರಾಜಿನಲ್ಲಿ ರೂ.೭,೧೦,೦೦೦ಕ್ಕೆ ಟೆಂಡರ್ ಹಕ್ಕು ಪಡೆದ ಬಿಡ್ಡುದಾರರು ರೂ. ೧ ಲಕ್ಷ ಹಣವನ್ನು ಡಿ.ಡಿ. ಮೂಲಕ ಪಾವತಿಸಿದ್ದು; ಬಾಕಿ ಹಣ ರೂ.೬,೧೦,೦೦೦ ವನ್ನು ನಿಯಮದಂತೆ ಸಂಜೆಯೊಳಗೆ ಪಾವತಿಸದ ಕಾರಣ, ಇನ್ನೋರ್ವ ಬಿಡ್ಡುದಾರ ದಿವಾಕರ್, ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ, ಎಚ್.ಆರ್. ಸುರೇಶ್ ನೇತೃತ್ವದಲ್ಲಿ ಕಾರ್ಯಕರ್ತರು ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು.

ಟೆಂಡರ್‌ನ ಪೂರ್ತಿ ಹಣ ಪಾವತಿಸದ ಕಾರಣ ಬಿಡ್ಡುದಾರರ ಇಎಂಡಿ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಷರತ್ತಿನ ಪ್ರಕಾರ ಮರುಹರಾಜು ಮಾಡುವಂತೆ ಆಗ್ರಹಿಸಿದರು.

ಪ್ರತಿಭಟನಾಕಾರರ ಆಗ್ರಹಕ್ಕೆ ಮಣಿದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಅಧ್ಯಕ್ಷೆ ಫರ್ಜಾನಾ ಶಾಹಿದ್ ಖಾನ್, ಉಪಾಧ್ಯಕ್ಷ ಎಸ್.ಆರ್.ಮಧು, ಸದಸ್ಯರಾದ ಎಸ್.ಎನ್.ರಘು, ಸರ್ದಾರ್ ಅಹಮ್ಮದ್, ಪಿಡಿಒ ಬಿ.ಜೆ.ಮೇದಪ್ಪ ತುರ್ತು ಸಭೆ ನಡೆಸಿದರು.

ನಂತರ ಅಧ್ಯಕ್ಷೆ ಫರ್ಜಾನಾ ಶಾಹಿದ್ ಖಾನ್ ಹಾಗೂ ಪಿಡಿಓ ಬಿ.ಜೆ.ಮೇದಪ್ಪ ಅವರು ಪ್ರತಿಭಟನಾಕಾರರಲ್ಲಿ ಕ್ಷಮೆ ಯಾಚಿಸಿ, ಹಸಿಮೀನು ಮಾರಾಟ ಮರುಹರಾಜಿನಲ್ಲಿ ರೂ. ೭,೧೦,೦೦೦ ಕ್ಕೆ ಟೆಂಡರ್ ಪಡೆದ ಬಿಡ್ಡುದಾರರು ಅದರ ಬಾಪ್ತು ರೂ. ೧ ಲಕ್ಷ ಡಿ.ಡಿ.ಮೂಲಕ ಪಾವತಿಸಿದ್ದು ಬಾಕಿ ರೂ. ೬,೧೦,೦೦೦ ವನ್ನು ಚೆಕ್ ಮೂಲಕ ತಾ. ೬ ರಂದೇ ಪಂಚಾಯಿತಿಗೆ ನೀಡಿರುತ್ತಾರೆ. ಚೆಕ್ ಅನ್ನು ಬ್ಯಾಂಕಿಗೆ ಸಲ್ಲಿಸಿದ್ದು ಬಾಕಿ ಮೊತ್ತದ ಹಣ ಪಂಚಾಯಿತಿ ಖಾತೆಗೆ ವರ್ಗಾವಣೆ ಆಗದಿದ್ದಲ್ಲಿ ನಿಯಮಾನುಸಾರ ಹಸಿಮೀನು ಮಾರಾಟದ ಹಕ್ಕನ್ನು ರದ್ದುಗೊಳಿಸಲಾಗುವುದು, ಮರುಹರಾಜು ಮಾಡಲಾಗುವುದು ಎಂದು ಹೇಳಿದರು.

ಬಳಿಕ ಜೆಡಿಎಸ್ ಮುಖಂಡರಾದ ನಾಪಂಡ ಮುತ್ತಪ್ಪ, ಎಚ್.ಆರ್.ಸುರೇಶ್ , ಆದಿಲ್ ಪಾಶ, ಬೆಳ್ಳಿಬಸವರಾಜ್, ಮತ್ತೂರ್ ಮಹೇಶ್, ದಿವಾಕರ್, ಅಜ್ಜಳ್ಳಿರವಿ, ಅಕ್ಮಲ್, ಕುಸುಮಾ, ಮೊಯಿದ್ದೀನ್, ಗೌಡಳ್ಳಿ ಮಹೇಶ್, ಕಾರ್ಯಕರ್ತರು ಪ್ರತಿಭಟನೆ ನಿಲ್ಲಿಸಿದರು.