ದಂಡ
ಮಡಿಕೇರಿ, ಮಾ. ೭: ಗ್ರಾಹಕರೊಬ್ಬರು ಖರೀದಿಸಿದ್ದ ಲ್ಯಾಪ್ಟಾಪ್ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅದರ ಮಾರಾಟಗಾರರ ಮೇಲೆ ಹೂಡಿದ್ದ ದಾವೆಗೆ ಸಂಬAಧಿಸಿದAತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿ ತೀರ್ಪು ನೀಡಿದೆ.
ದಕ್ಷಿಣ ಕೊಡಗಿನ ತೆರಾಲು ಗ್ರಾಮದ ಬೊಟ್ಟಂಗಡ ಪ್ರತಾಪ್ ಅವರ ಪುತ್ರ ಆದಿಪ್ ಕಾರ್ಯಪ್ಪ ಮೈಸೂರಿನಲ್ಲಿ ವಿದ್ಯಾರ್ಥಿಯಾಗಿದ್ದು, ಶೈಕ್ಷಣಿಕ ಅನುಕೂಲಕ್ಕಾಗಿ ಮೈಸೂರಿನ ರಿಲಯನ್ಸ್ ರೀಟೈಲ್ನಿಂದ ಡೆಲ್ ೩೫೯೩ ಲ್ಯಾಪ್ಟಾಪ್ ಅನ್ನು ರೂ. ೬೩,೯೯೯ ರಷ್ಟು ಹಣ ಪಾವತಿಸಿ ಖರೀದಿಸಿದ್ದರು. ಆದರೆ, ನಂತರದಲ್ಲಿ ಇದರಲ್ಲಿ ಬ್ಯಾಟರಿ, ಡಾಟಾ ಸ್ಟೋರೇಜ್ನಲ್ಲಿ ದೋಷ ಕಂಡು ಬಂದಿತ್ತು. ಈ ಬಗ್ಗೆ ವಾರಂಟಿ ಅವಧಿಯ ನಡುವೆ ಇವರು ಮಾರಾಟಗಾರರ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಲು ಕೇಳಿದರೂ ಅವರು ಸೂಕ್ತವಾಗಿ ಸ್ಪಂದಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಅವರು ಮಡಿಕೇರಿಯ ವಕೀಲರಾದ ಎಂ.ಎ. ನಿರಂಜನ್ ಅವರ ಮೂಲಕ ಮಡಿಕೇರಿಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದಾವೆ ಹೂಡಿದ್ದರು. ಈ ಬಗ್ಗೆ ಕೂಲಂಕುಶವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಸಿ. ರೇಣುಕಾಂಬ ಹಾಗೂ ಸದಸ್ಯರಾದ ಗೌರಮ್ಮಣ್ಣಿ ಅವರುಗಳು ಮಾರಾಟಗಾರರಿಗೆ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಲ್ಯಾಪ್ಟಾಪ್ ಮೊತ್ತಕ್ಕೆ ಶೇ. ೯ ರಷ್ಟು ಬಡ್ಡಿ ಸೇರಿಸಿ ಮರು ಪಾವತಿ ಮಾಡುವುದು.
ಸೇವಾ ನ್ಯೂನ್ಯತೆಗಾಗಿ ರೂ. ೩ ಸಾವಿರ, ಮಾನಸಿಕ ವೇದನೆಯ ಪರಿಹಾರವಾಗಿ ರೂ. ೨ ಸಾವಿರ ಹಾಗೂ ಪ್ರಕರಣದ ಖರ್ಚಿಗೆ ರೂ. ೧ ಸಾವಿರ ಹಣ ಪಾವತಿಸಲು ಆದೇಶಿಸಲಾಗಿದೆ. ಇದರಂತೆ ಮಾರಾಟಗಾರರು ಇದೀಗ ಪರ್ಯಾದುದಾರರಿಗೆ ಹಣ ಪಾವತಿಸಿರುವದಾಗಿ ವಕೀಲ ನಿರಂಜನ್ ಅವರು ಮಾಹಿತಿ ನೀಡಿದ್ದಾರೆ.