ಮಡಿಕೇರಿ, ಮಾ. ೭ : ‘ರಾಷ್ಟçದ ಮೂಲ ಸಂಸ್ಕೃತಿಯ ಬೇರು, ಭವ್ಯ ಭಾರತದ ತೇರು’ ಎಂಬುದನ್ನು ಯಾರೂ ಸಹ ಮರೆಯಬಾರದು. ಮೂಲ ಸಂಸ್ಕೃತಿ ಮತ್ತು ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಮೂಲ ಸಂಸ್ಕೃತಿ ಮತ್ತು ಕನ್ನಡ ಸಂಸ್ಕೃತಿ ರಾಜ್ಯ ಸಂಚಾಲಕರಾದ ಜಗದೀಶ್ ಹಿರೇಮನಿ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ‘ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ’ ನಶಿಸಿ ಹೋಗುತ್ತಿರುವ ತಳ ಸಮುದಾಯದ ವಿಶಿಷ್ಟ ಕಲೆಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಸ್ತುತ ಕಾಲದಲ್ಲಿ ಕಲಾ ಸಾಹಿತ್ಯದಲ್ಲಿ ಭಾವನಾತ್ಮಕತೆ ಕಡಿಮೆಯಾಗುತ್ತದೆ. ಇದರಿಂದ ಮೂಲ ಸಂಸ್ಕೃತಿ ಉಳಿಯಲು ಸಾಧ್ಯವೇ ಎಂಬುದನ್ನು ಚಿಂತಿಸಬೇಕಿದೆ. ಆ ನಿಟ್ಟಿನಲ್ಲಿ ವಿವಿಧ ಕಲಾಪ್ರಕಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
೩೧ ಜಿಲ್ಲೆಗಳ ೧೫೫ ಕಲಾತಂಡಗಳು ತಮ್ಮ ತಮ್ಮ ಕಲಾಪ್ರಕಾರಗಳ ತರಬೇತಿ ಪಡೆದು ನಶಿಸಿ ಹೋಗುತ್ತಿರುವ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸಲಾಗಿದೆ. ಆ ನಿಟ್ಟಿನಲ್ಲಿ ರಾಜ್ಯದ ೧೫೫ ಕಲಾತಂಡಗಳಲ್ಲಿ ೩೧ ಜಿಲ್ಲೆಯ ತಲಾ ೨ ತಂಡಗಳು ಇದೇ ಮಾರ್ಚ್, ೯ ಮತ್ತು ೧೦ ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಮೂಲ ಸಂಸ್ಕೃತಿ ಮತ್ತು ಕನ್ನಡ ಸಂಸ್ಕೃತಿ ಪ್ರಾದೇಶಿಕ ಸಂಚಾಲಕರಾದ ಎಂ.ಎಸ್. ಪರಮಾನಂದ ಅವರು ಮಾತನಾಡಿ ಕಲೆಗಳಲ್ಲಿ ಲಲಿತ ಕಲೆ, ಜಾನಪದ ಕಲೆ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಲಲಿತ ಕಲೆಯಲ್ಲಿ ಭರತನಾಟ್ಯ ಒಳಗೊಂಡರೆ. ಜಾನಪದದಲ್ಲಿ ಸಾಂಪ್ರದಾಯಿಕ ಕಲಾಪ್ರಕಾರಗಳನ್ನು ಒಳಗೊಂಡಿದೆ ಎಂದರು.
ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ. ಅನಂತಶಯನ ಮಾತನಾಡಿ ನಶಿಸಿ ಹೋಗುತ್ತಿರುವ ಕಲೆಗಳನ್ನು ಸಂರಕ್ಷಣೆ ಮಾಡಬೇಕಿದೆ. ಪ್ರತಿಯೊಬ್ಬರೂ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವಂತಾಗಬೇಕು. ಜೊತೆಗೆ ಕಲಿಸುವಂತಾಗಬೇಕು ಎಂದರು.
ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ ಎಲ್ಲಾ ಜನಾಂಗಗಳಲ್ಲಿಯೂ ಒಂದಲ್ಲ ಒಂದು ಕಲೆಗಳು ಇರುತ್ತವೆ. ಅದನ್ನು ಉಳಿಸಿಕೊಂಡು ಹೋಗಬೇಕು ಎಂದರು.
ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಲಾವಿದರಾದ ಕುಡಿಯರ ಶಾರದ, ನಾಣಚ್ಚಿಯ ರಮೇಶ್, ಈ.ರಾಜು, ಗಣೇಶ್, ಕುಟ್ಟಪ್ಪ, ಉಮೇಶ್, ಗಿರೀಶ್ ಇತರರನ್ನು ಸನ್ಮಾನಿಸಲಾಯಿತು.
ಕುಡಿಯರ ಶಾರದ ಮತ್ತು ತಂಡದವರಿAದ ದುಡಿ ಹಾಡು, ರಮೇಶ್ ಮತ್ತು ತಂಡದವರಿAದ ಗಿರಿಜನ ಹಾಡು ಹಾಗೂ ನೃತ್ಯ ಪ್ರದರ್ಶನ, ಈ.ರಾಜು ಮತ್ತು ತಂಡದವರಿAದ ಜಾನಪದ ಹಾಡು, ಗಣೇಶ್ ಮತ್ತು ತಂಡದವರಿAದ ಪೌರಾಣಿಕ ನಾಟಕ ಪ್ರದರ್ಶನ, ಗಿರೀಶ್ ಮತ್ತು ತಂಡದವರಿAದ ಗೀಗೀ ಪದ ಹಾಗೂ ಲಾವಣಿ ಹಾಡು ಜನಮನ ಸೆಳೆಯಿತು.
ನಗರಸಭಾ ಸದಸ್ಯ ಸತೀಶ್, ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ ಜಿಲ್ಲಾ ಸಂಚಾಲಕ ಜಿ.ಡಿ. ದುಶ್ಯಂತ್ ಕುಮಾರ್, ಸುಶೀಲ, ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ ಕುಶಾಲಪ್ಪ, ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿಯ ಮಹೇಶ್, ಪ್ರತಾಪ್ ಶಾಂತಳ್ಳಿ, ಜಾನಪದ ಪರಿಷತ್ ಸದಸ್ಯೆ ರೇವತಿ ರಮೇಶ್, ಕವಿತಾ ರಾಮ್, ಮೀನಾಕ್ಷಿ, ಇತರರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಸ್ವಾಗತಿಸಿದರು. ಮಡಿಕೇರಿ ತಾಲೂಕು ಜಾನಪದ ಪರಿಷತ್ತು ಅಧ್ಯಕ್ಷರಾದ ಅನಿಲ್ ಎಚ್.ಟಿ. ನಿರೂಪಿಸಿದರು. ಈ. ರಾಜು ಮತ್ತು ತಂಡದವರು ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ವಂದಿಸಿದರು.