ಸೋಮವಾರಪೇಟೆ, ಮಾ. ೬: ಇಲ್ಲಿಗೆ ಸಮೀಪದ ಯಡವಾರೆ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ, ಶ್ರೀ ಅಗ್ನಿ ಚಾಮುಂಡೇಶ್ವರಿ, ಶ್ರೀ ದೊಡ್ಡಮ್ಮತಾಯಿ ದೇವಾಲಯದಲ್ಲಿ ವಾರ್ಷಿಕ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದಲ್ಲಿ ಅಗ್ನಿ ಚಾಮುಂಡೇಶ್ವರಿ ಹಾಗೂ ದೈವದ ನೇಮೋತ್ಸವ ಧಾರ್ಮಿಕ ವಿಧಿವಿಧಾನ ಗಳೊಂದಿಗೆ ನೆರವೇರಿತು. ರಾತ್ರಿ ಕೊರಗಜ್ಜ ನೇಮ ಕಾರ್ಯಕ್ರಮ ಅರ್ಚಕ ಕೃಷ್ಣಪ್ಪ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದ ಪ್ರಯುಕ್ತ ಶ್ರೀ ದುರ್ಗಾಪರಮೇಶ್ವರಿ ಹಾಗೂ ನಾಗ ಬ್ರಹ್ಮದೇವರು ಮತ್ತು ಪರಿವಾರ ಶಕ್ತಿಗಳಾದ ಚಾಮುಂಡೇಶ್ವರಿ ಗುಳಿಗ ದೈವಗಳಿಗೆ ಪಂಚ ವಿಂಷಲೆ ಕಲಶಾಭಿಷೇಕ, ದೇವರಿಗೆ ಕಳಶಾಭಿಷೇಕ, ಪಂಚಾಮೃತ ಅಭಿಷೇಕ, ಮಧ್ಯಾಹ್ನ ಅಲಂಕಾರ ಪೂಜೆ, ನಾಗದೇವರಿಗೆ ಪಂಚಾಮೃತ ಅಭಿಷೇಕ, ನವ ಕಳಶ ಅಭಿಷೇಕ, ಅಲಂಕಾರ ಪೂಜೆ, ಪರಿವಾರ ದೈವಗಳಿಗೆ ಕಳಶ ಅಭಿಷೇಕ, ಪರ್ವ ತೇಂಜಲ ಸೇವೆ ಮತ್ತಿತರ ಪೂಜೆಗಳು ನಡೆದವು. ರಾತ್ರಿ ಪಾಷಾಣ ಮೂರ್ತಿ ಪಂಜುರ್ಲಿ ದೈವದ ನೇಮೋತ್ಸವ ಕಾರ್ಯಕ್ರಮಗಳು ನಡೆದವು. ಶಿವಾಲಯದ ಶ್ರೀ ಪಚ್ಚಡಿಬೈಲು ಎ. ಸುಬ್ರಹ್ಮಣ್ಯ ತಂತ್ರಿಗಳ ಪೌರೋಹಿತ್ವದಲ್ಲಿ ಪೂಜಾ ಕಾರ್ಯಗಳು ನಡೆದವು. ದೇವಾಲಯ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.