ಮಡಿಕೇರಿ, ಮಾ. ೬: ಮಡಿಕೇರಿ ಸಮೀಪದ ಮದೆನಾಡಿನ ಬಿ.ಜಿ.ಎಸ್ ವಿದ್ಯಾಸಂಸ್ಥೆಯ ಮೊದಲನೇ ವರ್ಷದ ವಾರ್ಷಿಕೋತ್ಸವ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ವಹಿಸಿದ್ದರು. ಉದ್ಘಾಟನೆಯನ್ನು ಬಿ.ಜಿ.ಎಸ್ ಸಂಸ್ಥಾನದ ಮೈಸೂರು - ಕೊಡಗು ಶಾಖಾ ಮಠದ ಕಾರ್ಯದರ್ಶಿಗಳಾದ ಶ್ರೀ ಸೋಮನಾಥೇಶ್ವರ ಸ್ವಾಮೀಜಿ ಅವರು ನೆರವೇರಿಸಿದರು ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ ಬಿ.ಸಿ ಸತೀಶ್, ಮದೆ ಮಹೇಶ್ವರ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪ್ರಮುಖರಾದ ಹುದೇರಿ ರಾಜೇಂದ್ರ, ಪಟ್ಟಡ ಲೋಭಯ್ಯ , ಬಿ.ಸಿ ಚೆನ್ನಪ್ಪ, ಹುಲಿಮನೆ ರಾಮಯ್ಯ, ವಿದ್ಯಾಸಂಸ್ಥೆಯ ಸ್ಥಳ ದಾನಿಗಳ ಕುಟುಂಬಸ್ಥರಾದ ಸಾಯಿ ಮುತ್ತಣ್ಣ ಮತ್ತು ಸಾಯಿ ಬೋಪಣ್ಣ, ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಮತ್ತು ಸಾಹಿತಿಗಳಾದ ಬಿ ಆರ್ ಜೋಯಪ್ಪ, ನಿವೃತ್ತ ಶಿಕ್ಷಕರು ಮತ್ತು ಆರ್ ಎಸ್ ಎಸ್ ಸ್ವಯಂಸೇವಕರಾದ ಶಿವರಾವ್, ಮದೆ ಪಂಚಾಯಿತಿ ಅಧ್ಯಕ್ಷರಾದ ಹುಲಿಮನೆ ರಾಮಯ್ಯ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಅಗೋಳಿಕಜೆ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಪುನೀತಅವರು ಸಂಸ್ಥೆಯ ವಾರ್ಷಿಕ ವರದಿ ಮಂಡನೆ ಮಾಡಿದರು. ಶಾಲೆಯ ವಿದ್ಯಾರ್ಥಿಗಳ ಪೋಷಕರಿಗೆ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದ ಪೋಷಕರಿಗೆ ಗಣ್ಯರಿಂದ ಬಹುಮಾನ ವಿತರಣೆ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮದೆ ಮಹೇಶ್ವರ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಪ್ರಮುಖರಾದ ಹುದೇರಿ ರಾಜೇಂದ್ರನವರು ವಿದ್ಯಾಸಂಸ್ಥೆಯನ್ನು ಗ್ರಾಮಸ್ಥರು ಸೇರಿ ಕಟ್ಟಿದ ಹಿಂದಿನ ದಿನಗಳನ್ನು ಮೆಲುಕು ಹಾಕಿದರು. ನಿವೃತ್ತ ಪ್ರಾಂಶುಪಾಲ ಬಿ.ಅರ್ ಜೋಯಪ್ಪ ಅವರು ಮಾತನಾಡಿ, ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಮದೆ ಮಹೇಶ್ವರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಸಾಧನೆಯನ್ನು ವಿವರಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಕೆ.ಜಿ. ಬೋಪಯ್ಯ ಅವರು ಶಿಕ್ಷಣ ಕ್ಷೇತ್ರದಲ್ಲಿ ಬಿಜಿಎಸ್ ವಿದ್ಯಾ ಸಂಸ್ಥೆಯ ಕೊಡುಗೆಯನ್ನು ಸ್ಮರಿಸಿದರು. ಜಿಲ್ಲಾಧಿಕಾರಿಗಳಾದ ಡಾ. ಬಿ.ಸಿ. ಸತೀಶ ಅವರು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕಿವಿಮಾತು ಹೇಳಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಲ್.ಕೆ.ಜಿಯಿಂದ ಎಂಟನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ನೆರೆದಿದ್ದ ಸಭಿಕರ ಮನಸೂರೆಗೊಳಿಸಿದರು. ಹಿತ ಸ್ವಾಗತಿಸಿ, ನಿರೂಪಣೆಯನ್ನು ರೋಷಿಣಿ ಮತ್ತು ಶ್ರುತಿ ಹಾಗೂ ವಂದನಾರ್ಪಣೆಯನ್ನು ಜಲಜಾಕ್ಷಿ ನಡೆಸಿಕೊಟ್ಟರು.