ಮುಳ್ಳೂರು, ಮಾ. ೫: ಸರಕಾರದ ಆದೇಶದಂತೆ ಜಿಲ್ಲೆಯ ಸ್ಥಳೀಯ ನಿವಾಸಿಗಳಾಗಿದ್ದು ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ತೋಟದ ಲೈನ್‌ಮನೆಯಲ್ಲಿ ವಾಸ ಮಾಡುತ್ತಿದ್ದರೂ ಕಾರ್ಮಿಕರು ಮತದಾರರ ಪಟ್ಟಿಗೆ ಸೇರ್ಪಡೆಯಾಗದಿರುವ ಹಿನ್ನೆಲೆಯಲ್ಲಿ ಅಂತಹವರನ್ನು ಗುರುತಿಸಿ ಮತದಾರರಡಿ ಪಟ್ಟಿಗೆ ಸೇರಿಸುವ ಸರ್ವೆ ಕಾರ್ಯವನ್ನು ಕಂದಾಯ ಇಲಾಖೆ ಅಧಿಕಾರಿಗಳು ಜಿಲ್ಲಾದ್ಯಂತ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಯ ಕಂದಾಯ ಇಲಾಖೆ ಅಧಿಕಾರಿಗಳು ಕಾಫಿ ತೋಟದ ಲೈನ್‌ಮನೆಯಲ್ಲಿ ವಾಸವಾಗಿರುವ ಸ್ಥಳೀಯ ಕಾರ್ಮಿಕರನ್ನು ಮತದಾರರ ಪಟ್ಟಿಗೆ ಸೇರಿಸುವ ಸರ್ವೆ ಕಾರ್ಯ ನಡೆಸುತ್ತಿದ್ದಾರೆ.

ಈಗಾಗಲೇ ಸ್ಥಳೀಯ ಕಾರ್ಮಿಕರು ಆಧಾರ್ ಕಾರ್ಡ್ ಹೊಂದಿರುತ್ತಾರೆ. ಆದರೆ ಅಕ್ಕಪಕ್ಕದ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಿರಲಿಲ್ಲ. ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಗುರುತಿಸಿ ತೋಟದ ಲೈನ್ ಮನೆಗಳಿಗೆ ತೆರಳಿದ ಕಂದಾಯ ಅಧಿಕಾರಿಗಳು ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಗೆ ಸೇರಿಸುವ ಸಲುವಾಗಿ ಸರ್ವೆ ಕಾರ್ಯ ನಡೆಸುತ್ತಿದ್ದಾರೆ.

ಸಮೀಕ್ಷಾ ಕಾರ್ಯದಲ್ಲಿ ಕೊಡ್ಲಿಪೇಟೆ ಕಂದಾಯ ಪರಿವೀಕ್ಷಕ ಮನುಕುಮಾರ್ ನೇತೃತ್ವದಲ್ಲಿ ವಿವಿಧ ಗ್ರಾಮ ಆಡಳಿತಾಧಿಕಾರಿಗಳಾದ ಶ್ವೇತಾ, ಎಸ್.ಎಸ್. ಚೈತ್ರ, ಪ್ರಕೃತಿ, ವಿದ್ಯಾ, ಕಂದಾಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದಾರೆ.