ಮಡಿಕೇರಿ, ಮಾ. ೫: ಜೀವಂತ ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸಿಐಡಿ ಪೊಲೀಸ್ ಅರಣ್ಯ ಘಟಕ ಯಶಸ್ವಿಯಾಗಿದೆ. ಆಂಧ್ರಪ್ರದೇಶ ಮೂಲದ ವೇಣು ಎಂಬಾತ ಆರೋಪಿ.

ನಗರದ ಮಂಗೇರಿರ ಮುತ್ತಣ್ಣ ವೃತ್ತದಿಂದ ಓಂಕಾರೇಶ್ವರ ದೇವಸ್ಥಾನದ ಕಡೆಗೆ ಹೋಗುವ ರಸ್ತೆಯ ಬಳಿ ಆರೋಪಿ ಸರಕಾರದ ಪರವಾನಗೆ ಇಲ್ಲದೆ ಅಕ್ರಮವಾಗಿ ಅಳಿವಿನ ಅಂಚಿನಲ್ಲಿ ಇರುವ ಒಂದು ಜೀವಂತ ನಕ್ಷತ್ರ ಆಮೆಯನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಪ್ರಯತ್ನಿಸುತ್ತಿರುವಾಗ ಪತ್ತೆ ಮಾಡಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಬಂದಿಸಲಾಯಿತು.

ಸಿಐಡಿ ಪೊಲೀಸ್ ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ. ಶರತ್‌ಚಂದ್ರ ನಿರ್ದೇಶನದ ಮೇರೆಗೆ, ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಕೆ.ಬಿ. ವಿಶ್ವನಾಥ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿಎಸ್‌ಐ ಸಿ.ಯು. ಸವಿ, ಹೆಡ್‌ಕಾನ್ಸ್ಟೇಬಲ್‌ಗಳಾದ ಶೇಖರ್, ರಾಘವೇಂದ್ರ, ಯೋಗೇಶ್, ಉಮೇಶ್, ಮೋಹನ್ ಮತ್ತು ಕಾನ್ಸ್ಟೇಬಲ್‌ಗಳಾದ ಸ್ವಾಮಿ ಮತ್ತು ಮಂಜುನಾಥ ಪಾಲ್ಗೊಂಡಿದ್ದರು.