ಸೋಮವಾರಪೇಟೆ, ಫೆ. ೨೮: ಪಟ್ಟಣದ ಕಕ್ಕೆಹೊಳೆ ಬಳಿಯಿರುವ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ೨೦೨೩ನೇ ಸಾಲಿನ ಜಾತ್ರೋತ್ಸವವು ಮಾ. ೧೨ ರಿಂದ ೧೪ ರವರೆಗೆ ಮೂರು ದಿನಗಳ ಕಾಲ ಜರುಗಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್‌ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್ ೧೨ ರಂದು ಬೆಳಿಗ್ಗೆ ೪.೩೦ಕ್ಕೆ ಗಣಪತಿ ಹೋಮದೊಂದಿಗೆ ಜಾತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ. ನಂತರ ೬.೩೦ಕ್ಕೆ ಧ್ವಜಾರೋಹಣ ನೆರವೇರಲಿದೆ. ಸಂಜೆ ೫.೩೦ಕ್ಕೆ ಕೇರಳದ ಕೊಳಪುರಂ ಮನಹಿಲ್ಲಂ ತಂತ್ರಿಗಳಾದ ಕೃಷ್ಣಕುಮಾರ್ ಅವರು ವಿಶೇಷ ಆಶ್ಲೇಷ ಪೂಜೆ ನಡೆಸಿಕೊಡುವರು. ಸಂಜೆ ೭ ಗಂಟೆಗೆ ದೇವಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಅನ್ನದಾನ ಮಂಟಪವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್‌ಕುಮಾರ್ ವಹಿಸಲಿದ್ದು, ಅತಿಥಿಗಳಾಗಿ ಚೌಡ್ಲು ಗ್ರಾ.ಪಂ. ಅಧ್ಯಕ್ಷ ಪಿ.ಎಂ. ಗಣಪತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಪಾಲ್ಗೊಳ್ಳಲಿದ್ದಾರೆ.

ಮಾ. ೧೩ರಂದು ಮಧ್ಯಾಹ್ನ ೧೨.೩೦ಕ್ಕೆ ಉತ್ಸವ ಆರಂಭವಾಗಲಿದೆ. ೧.೩೦ಕ್ಕೆ ದೇವಾಲಯದ ಪ್ರಧಾನ ಅರ್ಚಕರಿಂದ ಕಲಶ ಪೂಜೆ ಪೂರೈಸಿದ ನಂತರ ಅಪರಾಹ್ನ ೩.೩೦ಕ್ಕೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ ನಡೆಯಲಿದೆ. ಸಂಜೆ ೪.೩೦ಕ್ಕೆ ಕೇರಳದ ಸಿಂಗಾರಿ ಮೇಳದೊಂದಿಗೆ ಕಲಶದ ಮೆರವಣಿಗೆ ಆರಂಭವಾಗಲಿದೆ. ಸಂಜೆ ೬.೩೦ಕ್ಕೆ ವಿಷ್ಣುಮೂರ್ತಿ ದೇವರ ವೆಳ್ಳಾಟಂ, ೭ ಗಂಟೆಗೆ ಕರಿಂಗುಟ್ಟಿ ದೇವರ ವೆಳ್ಳಾಟಂ, ೭.೩೦ಕ್ಕೆ ಕಂಡಕರ್ಣ ದೇವರ ವೆಳ್ಳಾಟಂ, ರಾತ್ರಿ ೮.೩೦ಕ್ಕೆ ಭಗವತಿ ದೇವಿಯ ವೆಳ್ಳಾಟಂ, ೯.೩೦ಕ್ಕೆ ರಕ್ತ ಚಾಮುಂಡಿ ದೇವಿಯ ವೆಳ್ಳಾಟಂ, ರಾತ್ರಿ ೧೦.೩೦ಕ್ಕೆ ಪೊಟ್ಟನ್ ದೇವರ ವೆಳ್ಳಾಟಂ ಮುಗಿದ ನಂತರ ರಾತ್ರಿ ೧೧.೩೦ಕ್ಕೆ ದೇವರ ಕಳಿಕ್ಕಾಪಾಟ್ ನಡೆಯಲಿದೆ. ರಾತ್ರಿ ೭.೩೦ ಗಂಟೆಯಿAದ ದೇವಾಲಯದಲ್ಲಿ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಅನ್ನದಾನದ ನಂತರ ಆಕರ್ಷಕ ಪಟಾಕಿ ಮತ್ತು ಸಿಡಿಮದ್ದುಗಳ ಪ್ರದರ್ಶನ ಜರುಗಲಿದೆ.

ಮಾರ್ಚ್ ೧೪ ರಂದು ಜಾತ್ರೋತ್ಸವದ ಕೊನೆಯ ದಿನ ಬೆಳಗಿನ ಜಾವ ೧ ಗಂಟೆಗೆ ಭಗವತಿ ದೇವಿಯ ಕೋಲ, ೨ ಗಂಟೆಗೆ ಕಂಡಕರ್ಣ ದೇವರ ಕೋಲ, ೩ ಗಂಟೆಗೆ ಪೊಟ್ಟನ್ ದೇವರ ಕೋಲ, ಬೆಳಿಗ್ಗೆ ೪ ಗಂಟೆಗೆ ಕರಿಂಗುಟ್ಟಿ ಶಾಸ್ತಾವು ದೇವರ ಕೋಲ, ೪.೩೦ಕ್ಕೆ ಪೊಟ್ಟನ್ ದೇವರು ಅಗ್ನಿಗೇರುವುದು, ಬೆಳಗಿನ ಜಾವ ೫ ಗಂಟೆಗೆ ಶ್ತೀ ಮುತ್ತಪ್ಪ ಹಾಗೂ ತಿರುವಪ್ಪ ದೇವರ ಕೋಲಗಳು ನಡೆಯಲಿದ್ದು, ಬೆಳಿಗ್ಗೆ ೭ ಗಂಟೆಗೆ ರಕ್ತ ಚಾಮುಂಡಿ ದೇವಿಯ ಕೋಲ, ೯ ಗಂಟೆಗೆ ವಿಷ್ಣುಮೂರ್ತಿ ದೇವರ ಕೋಲ, ಬೆಳಿಗ್ಗೆ ೧೦ ಗಂಟೆಗೆ ಕಂಡಕರ್ಣ ದೇವರ ಗುರು ಶ್ರೀದರ್ಪಣ, ಮಧ್ಯಾಹ್ನ ೧೨ಕ್ಕೆ ಗುಳಿಗ ದೇವರ ಕೋಲ ೧.೩೦ಕ್ಕೆ ಗುಳಿಗ ದೇವರ ಬಲಿ ಅರ್ಪಣೆ ನಡೆಯಲಿದ್ದು, ಅಪರಾಹ್ನ ೩ ಗಂಟೆಗೆ ಕೋಲಗಳ ಮುಕ್ತಾಯ ಕಾರ್ಯಕ್ರಮ ಜರುಗಲಿದೆ.

ಮಾ. ೧ ರ ಮಧ್ಯಾಹ್ನ ೧೨.೩೦ ರವರೆಗೆ ದೇವಸ್ಥಾನದ ತಂತ್ರಿಗಳಾದ ಕಾಳೇಘಾಟ್‌ನ ನಾರಾಯಣನ್ ನಂಬೂದರಿ ಅವರ ನೇತೃತ್ವದಲ್ಲಿ ಪ್ರತಿಷ್ಠಾಪನಾ ವಾರ್ಷಿಕೋತ್ಸವ ನಡೆಯಲಿದೆ ಎಂದು ಅಧ್ಯಕ್ಷ ವಿನೋದ್ ತಿಳಿಸಿದ್ದಾರೆ.