ಪಾಲಿಬೆಟ್ಟ, ಫೆ. ೨೮: ತಾಯಿ ಮಗುವಿಗೆ ಜನ್ಮ ನೀಡಬಹುದು; ಆದರೆ ಮಕ್ಕಳಿಗೆ ಮುಂದಿನ ಭವಿಷ್ಯ ರೂಪಿಸಲು ಶಿಕ್ಷಕರ ಪಾತ್ರ ಬಹಳ ಮುಖ್ಯವಾಗುತ್ತದೆ. ಶಿಕ್ಷಣದ ಮೂಲಕ ಭವಿಷ್ಯ ರೂಪಿಸಿಕೊಂಡ ಅದೆಷ್ಟು ವಿದ್ಯಾರ್ಥಿಗಳು ಕಲಿತ ಶಾಲೆ ಕಲಿಸಿದ ಶಿಕ್ಷಕರನ್ನ ಮರೆತು ಹೋಗುತ್ತಾರೆ. ಅಂತಹದರಲ್ಲಿ ಹೆಬ್ಬಾಲೆ ಭದ್ರಗೋಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೧೯೮೯-೯೦ ಸಾಲಿನಲ್ಲಿ ೫ನೇ ತರಗತಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ೩೪ ವರ್ಷಗಳ ಬಳಿಕವೂ ತಮ್ಮ ನೆಚ್ಚಿನ ಶಾಲೆ ಹಾಗೂ ಶಿಕ್ಷಕರನ್ನ ನೆನೆಪಿಸಿಕೊಂಡು ಗೌರವ ಸಲ್ಲಿಸುವ ಮೂಲಕ ಮಾದರಿಯಾಗಿದ್ದಾರೆ.

ಇಂತಹ ಗುರುವಂದನ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಹೆಬ್ಬಾಲೆ ನೆಲ್ಲಿಕಾಡು ಭದ್ರಗೋಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣ ದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಬ್ಬದ ಸಂಭ್ರಮ ಸಡಗರ ಊರಿನವರ ಗಮನ ಸೆಳೆಯಿತು. ಮಹಿಳೆಯರು ಪುರುಷರು ಮಕ್ಕಳಿಗೆ ಹಗ್ಗಜಗ್ಗಾಟ, ಮ್ಯೂಸಿಕಲ್ ಚೇರ್, ಕಾಳು ಹೆಕ್ಕುವುದು, ಕಪ್ಪೆ ಜಿಗಿತ, ಓಟ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ವಿವಿಧ ನೃತ್ಯ, ಹಾಡುಗಾರಿಕೆ, ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಗಮನ ಸೆಳೆಯಿತು.

ಸಮಾರೋಪ ಸಮಾರಂಭದಲ್ಲಿ ಶಿಕ್ಷಕರುಗಳಾದ ತುಳಸಿ ಮಾಲ, ಮೋಹಿನಿ, ದಿವಂಗತ ರವಿ ಅವರ ಪರವಾಗಿ ಪತ್ನಿ ಸುಬ್ಬಕ್ಕಿ ಅವರನ್ನು ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ಸಮಾಜ ಸೇವಕ ತೇಜು ತಮ್ಮಯ್ಯ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ರೂಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಆಶಾ ಜೇಮ್ಸ್, ಶಿಕ್ಷಣ ಇಲಾಖೆಯ ಬಿಆರ್‌ಪಿ ಓಮನ, ಮಸೀದಿಯ ಖತೀಬ್ ಸೂಫಿಯಾನ್ ಸಹದಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಮುನೀರ್, ಸಹ ಕಾರ್ಯದರ್ಶಿಗಳಾದ ರಮೇಶ್, ರಾಜೇಶ್, ಖಜಾಂಚಿ ವೇಣುಗೋಪಾಲ್ ಶಿಕ್ಷಕರುಗಳಾದ ಸತೀಶ್, ಚೆನ್ನವೀರ ಶೆಟ್ಟಿ, ಬೊಮ್ಮಲಿಂಗಯ್ಯ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.