ಮಡಿಕೇರಿ, ಫೆ. ೨೬: ಪಟ್ಟಭದ್ರ ಹಿತಾಸಕ್ತಿಗಳಿಂದ ವಕ್ಫ್ ಮಂಡಳಿಗೆ ಸೇರಿದ ರಾಜ್ಯವ್ಯಾಪಿ ಸಾವಿರಾರು ಕೋಟಿ ಮೌಲ್ಯದ ಆಸ್ತಿ ಕಬಳಿಕೆ ಆಗಿದ್ದು, ಕಾನೂನು ಹಾಗೂ ಸಂಘಟಿತ ಹೋರಾಟದಿಂದ ಮಾತ್ರ ನ್ಯಾಯ ದೊರಕುತ್ತದೆ ಎಂದು ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಅಭಿಮತ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ವತಿಯಿಂದ ನಡೆದ ‘ವಕ್ಫ್ ಸಮ್ಮಿಟ್’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ರಾಜ್ಯ ಸರಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ವೀರಾಜಪೇಟೆ ಶಾಸಕರೂ ಆಗಿರುವ ಕೆ.ಜಿ. ಬೋಪಯ್ಯ, ರಾಜ್ಯವ್ಯಾಪಿ ವಕ್ಫ್ಗೆ ಸೇರಿದ ಸಾವಿರಾರು ಎಕರೆ ಜಾಗಗಳಿವೆ. ಆದರೆ, ಕೇವಲ ೬ ಕೋಟಿ ಆದಾಯ ಮಾತ್ರ ಬೊಕ್ಕಸಕ್ಕೆ ಬರುತಿತ್ತು. ಇತ್ತೀಚೆಗೆ ಸರಕಾರಿ ಜಮೀನು ಸಂರಕ್ಷಣಾ ಸಮಿತಿ ಸಭೆಯಲ್ಲಿ ಆಸ್ತಿಯ ಸಂರಕ್ಷಣೆ ಕುರಿತು ಕ್ರಮಕೈಗೊಳ್ಳಲು ಹಾಗೂ ಆದಾಯ ಮೂಲಗಳನ್ನು ವೃದ್ಧಿಸಲು ಸೂಚಿಸದ ನಂತರ ಆದಾಯ ರೂ. ೬೦ ಕೋಟಿ ಹೆಚ್ಚಳ ವಾಗಿದೆ. ಆಡಳಿತವನ್ನು ನಿಯಂತ್ರಿಸುವ ಪಟ್ಟಭದ್ರ ಹಿತಾಸಕ್ತಿಗಳಿಂದ ವಕ್ಫ್ ಆಸ್ತಿ ಒತ್ತುವರಿಯಾಗಿ ಅನ್ಯರ ಪಾಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ಮಾಡಲಾಗುತ್ತದೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯಿಂದ ಬಿಡಿಗಾಸು ಆದಾಯ ಬರುತ್ತಿರುವುದು ಅವ್ಯವಹಾರಕ್ಕೆ ನಿದರ್ಶನವಾಗಿದೆ. ಆಸ್ತಿಗಳು ಮರುವಶಕ್ಕೆ ಬಂದು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಸರಕಾರದ ಹಣವೇ ವಕ್ಫ್ಗೆ ಬೇಡ. ಈ ಹಿನ್ನೆಲೆ ಕಾನೂನು ಹೋರಾಟ ಅಗತ್ಯ ಎಂದು ಹೇಳಿದ ಅವರು, ಅನ್ವರ್ ನಲಪಾಡಿ ವರದಿ ಜಾರಿಯಾದರೆ ಮುಸ್ಲಿಮರಿಗೆ ಪ್ರಯೋಜನವಾಗುತ್ತದೆ. ಸರ್ವರು ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಅಂದಾಜಿನ ಪ್ರಕಾರ ರಾಜ್ಯದಲ್ಲಿ ವಕ್ಫ್ಗೆ ಸೇರಿದ ರೂ. ೪೪ ಸಾವಿರ ಕೋಟಿ ಮೌಲ್ಯದ ಆಸ್ತಿ ಇದೆ.
(ಮೊದಲ ಪುಟದಿಂದ) ಆದರೆ, ಇದರಲ್ಲಿ ಬಹುತೇಕ ಕಬಳಿಕೆಯಾಗಿ ದುರುಪಯೋಗವಾಗುತ್ತಿದೆ. ನಿಯಮಾನುಸಾರ ಬಾಡಿಗೆ ಬಂದರೆ ಕೋಟ್ಯಂತರ ರೂಪಾಯಿ ಆದಾಯ ಲಭಿಸುತ್ತದೆ. ಪಾರದರ್ಶಕವಾಗಿ ಕೆಲಸ ಮಾಡುವ ಮೂಲಕ ಜನರ ಹಿತ ಸಾಧನೆಗೆ ವಕ್ಫ್ ಮುಂದಾಗಬೇಕು ಎಂದು ಕರೆ ನೀಡಿದ ಅವರು, ಮುಸ್ಲಿಂ ವಿದ್ಯಾರ್ಥಿನಿಯರಿಗಾಗಿ ರಾಜ್ಯದ ೨ನೇ ವಸತಿ ಶಾಲೆ ಕೊಡ್ಲಿಪೇಟೆಯಲ್ಲಿ ನಿರ್ಮಾಣಗೊಳ್ಳುತ್ತಿದ್ದು ಇದರಿಂದ ಪ್ರಯೋಜನವಾಗುತ್ತದೆ. ಮುಸ್ಲಿಂ ಸಮುದಾಯದಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗುತ್ತಿರುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಜಾಗೃತಗೊಳ್ಳ ಬೇಕು. ಬಾಲಕಿಯರಿಗೆ ಶಿಕ್ಷಣ ಕೊಡಿಸುವ ಮೂಲಕ ಸುಶಿಕ್ಷಿತಗೊಳಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಒತ್ತಿ ಹೇಳಿದರು.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಎನ್.ಕೆ. ಮುಹಮ್ಮದ್ ಶಾಫಿ ಸಅದಿ ಮಾತನಾಡಿ, ಕಬಳಿಕೆಯಾಗಿ ರುವ ಜಾಗ ಮರುವಶಕ್ಕೆ ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ. ಪ್ರತಿಜಿಲ್ಲೆಯಲ್ಲಿ ನೂರಾರು ಎಕರೆ ವಕ್ಫ್ಗೆ ಸೇರಿದ ಜಾಗಗಳಿವೆ. ಇವುಗಳಲ್ಲಿ ಬಹುತೇಕ ಒತ್ತುವರಿ ಯಾಗಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಇದನ್ನು ತೆರವು ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಏಷ್ಯಾದ ಅತೀ ದೊಡ್ಡ ಖಬರಸ್ಥಾನವಿರುವ ಬೀದರ್‌ನಲ್ಲಿ ಇದೀಗ ಕೇವಲ ೧೫೦ ಎಕರೆ ಜಾಗ ಉಳಿದಿರುವುದು ಕಬಳಿಕೆಯನ್ನು ನಿದರ್ಶಿಸುತ್ತಿದೆ. ಇದರ ಹಿಂದೆ ಪ್ರಭಾವಿ ರಾಜಕಾರಣಿಗಳ ಕೈವಾಡವೂ ಇದೆ. ಜಾಗಗಳನ್ನು ಮರಳಿ ಪಡೆಯಲು ಕಾನೂನು ಮೊರೆ ಹೋಗಲಾಗಿದೆ. ಎಲ್ಲರೂ ಒಂದಾದರೆ ಮಾತ್ರ ನ್ಯಾಯ ದೊರೆಯುತ್ತದೆ. ಆಸ್ತಿಗಳು ಲಭಿಸಿದ್ದಲ್ಲಿ ಮುಸ್ಲಿಂ ಸಮುದಾಯದಲ್ಲಿ ಸಂಕಷ್ಟದಲ್ಲಿರು ವವರಿಗೆ ಸಹಕಾರಿಯಾಗಲಿದೆ. ಬರುವ ಆದಾಯ ಅವರಿಗಾಗಿ ಶೇ ೯೩ ಮೀಸಲಿಡಲಾಗುತ್ತದೆ ಎಂದರು.
ವಕ್ಫ್ ಸಲಹಾ ಸಮಿತಿ ಅಧಿಕಾರಿ ಮಹಮ್ಮದ್ ಇರ್ಫಾನ್ ಮಾತನಾಡಿ, ಕಳೆದ ೫ ವರ್ಷಗಳಲ್ಲಿ ಮಸೀದಿಗಳ ದುರಸ್ತಿ ಹಾಗೂ ಜೀರ್ಣೋದ್ಧಾರಕ್ಕೆ ೨.೨೩ ಕೋಟಿ, ತಡೆಗೋಡೆ ನಿರ್ಮಾಣಕ್ಕೆ ರೂ. ೪ ಕೋಟಿ ಜೊತೆಗೆ ವಿಶೇಷ ಅನುದಾನವೂ ಸರಕಾರದಿಂದ ದೊರೆತಿದೆ ಎಂದು ಮಾಹಿತಿ ಒದಗಿಸಿದರು.
ವಕ್ಫ್ ಸಲಹಾ ಸಮಿತಿ ಜಿಲ್ಲಾಧ್ಯಕ್ಷ ಅಬ್ದುಲ್ ಹಕೀಂ ಗೋಣಿಕೊಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಕೊಡಗು ಜಿಲ್ಲಾ ಸಹಾಯಕ ಖಾಝಿಗಳಾದ ಅಬ್ದುಲ್ಲಾ ಫೈಝಿ, ಶಾದುಲಿ ಫೈಝಿ ಪ್ರಾರ್ಥನೆ ನೆರವೇರಿಸಿ ದರು. ರಾಜ್ಯ ವಕ್ಫ್ ಮಂಡಳಿಯ ಅಪರ ಕಾರ್ಯನಿರ್ವಹಣಾಧಿಕಾರಿ ಖಾದರ್ ಶಾ, ಸಲಹಾ ಸಮಿತಿ ಉಪಾಧ್ಯಕ್ಷರುಗಳಾದ ಮುಹಮ್ಮದ್ ನಾಸೀರ್, ಎಂ.ಜಿ. ನಝೀರ್, ಶಾಫಿ ಸಅದಿ, ಸದಸ್ಯರುಗಳಾದ ಕುಂಞ ಅಬ್ದುಲ್ಲಾ ಸೇರಿದಂತೆ ಇನ್ನಿತರರು ಹಾಜರಿದ್ದರು.