ಮಡಿಕೇರಿ, ಫೆ. ೨೬: ತಾಲೂಕು ಸವಿತಾ ಸಮಾಜದ ವತಿಯಿಂದ ಸಮಾಜದ ಬಾಂಧವರಿಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡೋತ್ಸವಕ್ಕೆ ಗಣ್ಯರು ಚಾಲನೆ ನೀಡಿದರು.
ಮೂರು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟದ ಅಂಗವಾಗಿ ಮೊದಲ ದಿನ ನಡೆದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಂ. ನಂದಕುಮಾರ್ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಸಾಮಾಜಿಕ ವಾಗಿ ಹಿಂದುಳಿದ ಸಮಾಜಗಳು ಸಂಘಟಿತರಾಗುವುದು ಸವಾಲಿನ ಕೆಲಸವಾಗಿದೆ. ಸಮಾಜದ ಬೆಳವಣಿಗೆಗೆ ಸಂಘಟನೆ ಅವಶ್ಯಕತೆ ಇದೆ. ನಮ್ಮ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಘಟಿತರಾಗುವುದು ಅತೀ ಮುಖ್ಯ. ಕ್ರೀಡೆಯ ಮೂಲಕ ಬಾಂಧವ್ಯ ವೃದ್ಧಿಸುವುದರಿಂದ ಈ ರೀತಿಯ ಕಾರ್ಯಕ್ರಮಗಳು ನಿರಂತರವಾಗಿರ ಬೇಕು. ಜಾತಿಗಳನ್ನು ಕೆಲವೊಂದು ಕಾಯಕಕ್ಕೆ ಸೀಮಿತಗೊಳಿಸಲಾಗಿದೆ. ಇದರಿಂದ ಹೊರಬಂದು ಆರ್ಥಿಕ ಹಾಗೂ ಸಾಮಾಜಿಕವಾಗಿ ಮುಂದು ವರೆಯುವಂತೆ ಕರೆ ನೀಡಿದರು.
ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಮಾತನಾಡಿ, ಶೋಷಿತ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವುದು ಶ್ಲಾಘನೀಯ. ಸವಿತಾ ಸಮಾಜ ಇಲ್ಲದಿದ್ದರೆ ಮನುಷ್ಯರು ಮನೆಯಿಂದ ಹೊರಬಾರದ ಸ್ಥಿತಿ ಸೃಷ್ಟಿಯಾಗುತ್ತದೆ. ಸವಿತಾ ಸಮಾಜದ ಮೂಲ ವೃತ್ತಿಗೆ ಬೇರೆ ರಾಜ್ಯದವರು ಲಗ್ಗೆ ಇಡುತ್ತಿರುವುದು ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದರು.
ಕೊಡಗು ಪ್ರೆಸ್ ಕ್ಲಬ್ ಖಜಾಂಜಿ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ, ವೃತ್ತಿ ಜಂಜಾಟದಲ್ಲಿ ಕುಟುಂಬ ದೊಂದಿಗೆ ಸೇರುವುದು ಕಡಿಮೆ ಯಾಗಿದೆ. ಈ ರೀತಿಯ ಕಾರ್ಯಕ್ರಮ ದಿಂದ ಬಾಂಧವ್ಯ ಬೆಳೆಯುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿ. ಸವಿತಾ ಸಮಾಜ ವೃತ್ತಿ ಬಾಂಧವರಿಗೆ ವಿದೇಶದಲ್ಲಿಯೂ ವಿಪುಲ ಅವಕಾಶಗಳಿವೆ. ಅದನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮುನ್ನಡೆಯುವಂತೆ ಕರೆ ನೀಡಿದರು.
(ಮೊದಲ ಪುಟದಿಂದ)
ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಎಂ.ಟಿ. ಮಧು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್. ದೊರೇಶ್, ಕ್ರೀಡಾ ಸಮಿತಿ ಅಧ್ಯಕ್ಷ ಮಧು, ಮಹಿಳಾ ಘಟಕದ ಅಧ್ಯಕ್ಷೆ ಆರ್.ಬಿ. ವಸಂತಿ, ಗೌರವಾಧ್ಯಕ್ಷರುಗಳಾದ ಹೆಚ್.ಡಿ. ಈರಪ್ಪ, ಸುಂದರಮ್ಮ ಸೇರಿದಂತೆ ಇನ್ನಿತರರು ಹಾಜರಿದ್ದರು.
ಪ್ರೀತಂ, ನೆಹಲ್ ಪ್ರಾರ್ಥಿಸಿ, ಜಯಂತಿ ಆಜಿತ್ ಸ್ವಾಗತಿಸಿ, ಅವಿನಾಶ್ ಬೊಟ್ಲಪ್ಪ ನಿರೂಪಿಸಿ, ಚರಣ್ ಬಲ್ಯದ ವಂದಿಸಿದರು.