ಸಿದ್ದಾಪುರ, ಫೆ. ೨೬: ಸಿದ್ದಾಪುರದ ಶ್ರೀ ಮುತ್ತಪ್ಪ ಶ್ರೀ ಭಗವತಿ ದೇವಾಲಯದ ವಾರ್ಷಿಕೋತ್ಸವವು ವಿವಿಧ ಪೂಜಾ ಕೈಂಕರ್ಯ ತೆರೆ ಮಹೋತ್ಸವದೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದಲ್ಲಿ ಗಣಪತಿ ಹೋಮ, ದುರ್ಗಾಪೂಜೆ, ಆಶ್ಲೇಷ ಬಲಿ, ನಾಗಹೋಮ, ಮಹಾಪೂಜೆ, ದೇವಿಯ ನರ್ತನ ನೆರವೇರಿತು. ಐದು ದಿನಗಳ ಕಾಲ ನಡೆದ ಉತ್ಸವದಲ್ಲಿ ಕೊನೆಯ ದಿನ ಶ್ರೀ ಮುತ್ತಪ್ಪ ಶಾಸ್ತಪ್ಪ ಗುಳಿಗನ ತೆರೆಗಳು ಹಾಗೂ ಮೂರು ವಸೂರಿಮಾಲ ತೆರೆಗಳನ್ನು ಕಾವೇರಿ ನದಿಯಿಂದ ಚಂಡೆಯೊAದಿಗೆ ದೇವಾಲಯಕ್ಕೆ ಕರೆತರಲಾಯಿತು. ತಿರುವಪ್ಪನ್, ಮುತ್ತಪ್ಪನ್, ಭಗವತಿ, ವಿಷ್ಣುಮೂರ್ತಿ ತೆರೆಗಳು ನೋಡುಗರ ಮನಸೂರೆಗೊಳಿಸಿತು. ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಐದು ದಿನಗಳ ಕಾಲ ಮಧ್ಯಾಹ್ನ ಹಾಗೂ ರಾತ್ರಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ವಾರ್ಷಿಕೋತ್ಸವದ ಪ್ರಯುಕ್ತ ದೇವಾಲಯ ಹಾಗೂ ಸುತ್ತಮುತ್ತಲ ರಸ್ತೆಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು. ಜಿಲ್ಲೆಯ ವಿವಿಧೆಡೆಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.