ವೀರಾಜಪೇಟೆ, ಫೆ. ೨೬: ಜಿಲ್ಲೆಯಲ್ಲಿ ಕೇರಳ ರಾಜ್ಯ ಮೂಲದ ಹಲವು ಬಗೆಯ ಉತ್ಸವಾದಿಗಳು ನಡೆಯುವುದು ಸಾಮಾನ್ಯವಾಗಿದೆ. ಅದರಂತೆ ಉತ್ತರ ಕೇರಳ ರಾಜ್ಯದಲ್ಲಿ ಗತಕಾಲದಿಂದ ಆಚರಣೆಯಲ್ಲಿರುವ ಪೊಂಗಾಲವನ್ನು ಅಮ್ಮತ್ತಿ ಸಮೀಪದ ಪುಲಿಯೇರಿ ಗ್ರಾಮದ ಭಗವತಿ ಕ್ಷೇತ್ರದಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು.

ವೀರಾಜಪೇಟೆ ತಾಲೂಕು ಅಮ್ಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಲಿಯೇರಿ ಗ್ರಾಮದ ಮಂಗುಯಿಯಿಲ್ ಕುಟುಂಬ ವರ್ಗಗಳ ಸ್ಥಳದಲ್ಲಿ ಸ್ಥಿತಗೊಂಡಿರುವ ಶ್ರೀ ಭಗವತಿ ದೇವಿಯ ವಾರ್ಷಿಕ ಉತ್ಸವ ತಾ. ೧೮ ರಿಂದ ಆರಂಭವಾಗಿ ತಾ. ೨೨ ರಂದು ಸಂಜೆ ಗುಹ್ಯ ಸಮೀಪದ ಕಾವೇರಿ ನದಿಯಲ್ಲಿ ದೇವಿಯ ಜಳಕವಾದ ನಂತರದಲ್ಲಿ ಶೋಭಾಯಾತ್ರೆಯೊಂದಿಗೆ ದೇವಾಲಯಕ್ಕೆ ಆಗಮಿಸುವ ಮೂಲಕ ತೆರೆಕಂಡಿತು. ಐದು ದಿನಗಳ ಕಾಲ ನಡೆದ ಉತ್ಸವದಲ್ಲಿ ದಿನನಿತ್ಯ ಪ್ರಾತ:ಕಾಲ ಗಣಪತಿ ಹೋಮ, ಉಷ ಪೂಜೆ, ಪ್ರಬಾತ ಭೋಜನ, ಬ್ರಹ್ಮಕಲಶ ಪೂಜೆ ಮಧ್ಯಾಹ್ನ ಪೂಜೆ, ನಡೆದು ಸಂಜೆ ದೀಪಾರಾಧನೆ, ಭಗವತಿ ಸೇವೆ ರಾತ್ರಿ ಶ್ರೀ ದೇವಿಗೆ ಸಲ್ಲಿಕೆಯಾದವು. ಉತ್ಸವದ ಕೊನೆಯ ದಿನವಾದ ತಾ. ೨೨ ರಂದು ಮಾಹಾ ಪೊಂಗಾಲ, ನೈವೇದ್ಯ ಸಮರ್ಪಣೆ, ಬ್ರಹ್ಮ ಕಲಶ ಪೂಜೆ, ಮಾಹಾಪೂಜೆ ಸಲ್ಲಿಸಲಾಯಿತು. ಸಂಜೆ ಕಾವೇರಿ ನದಿಯಿಂದ ದೇವಿ ವಿಗ್ರಹ ಮೆರೆವಣಿಗೆ, ದೇವಿಯ ಆರಾಟ್ ದೀಪಾರಾಧನೆ ರಾತ್ರಿ ಮಾಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.