ದಕ್ಷಿಣ ಕೊಡಗಿನ ಆಧ್ಯಾತ್ಮಿಕ ಕೇಂದ್ರವಾಗಿರುವ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮವು ಪ್ರಶಾಂತವಾದ ಹಚ್ಚ ಹಸಿರಿನ ಪ್ರಕೃತಿಯ ಮಡಿಲಲ್ಲಿ ನೆಲೆಗೊಂಡು ಅನೇಕ ಸೇವಾಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಸ್ವಾಮಿ ವಿವೇಕಾನಂದರ ಪುನರುತ್ಥಾನದ ಮಹಾ ಕಾರ್ಯವನ್ನು ಸಾಕಾರಗೊಳಿಸಲೆಂದು ೧೯೨೭ರಲ್ಲಿ ಪೊನ್ನಂಪೇಟೆಯಲ್ಲಿ ಶ್ರೀರಾಮಕೃಷ್ಣ ಶಾರದಾಶ್ರಮವು ಪ್ರಾರಂಭವಾಯಿತು. ಅಂದಿನ ಬೆಂಗಳೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಮಲಾನಂದರು ಮಡಿಕೇರಿ ಮತ್ತು ಇನ್ನಿತರ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದರು. ಈ ಸಂದರ್ಭ ಅಂದಿನ ಗಣ್ಯ ವ್ಯಕ್ತಿಗಳಾದ ಅಚ್ಚಿಯಂಡ ಕಾಳಮ್ಮಯ್ಯ, ಕೆ. ಜಿ. ಚಂಗಪ್ಪ, ಡಾ.ಎ.ಎಂ. ಮುತ್ತಪ್ಪ ಮತ್ತಿತರರು ರಾಮಕೃಷ್ಣ ಮಿಷನ್‌ನ ಒಂದು ಕೇಂದ್ರವನ್ನು ಕೊಡಗಿನಲ್ಲಿ ಸ್ಥಾಪಿಸಬೇಕೆಂದು ವಿನಂತಿಸಿಕೊAಡರು. ಕಾಳಮ್ಮಯ್ಯ ಅವರು ಪೊನ್ನಂಪೇಟೆಯಲ್ಲಿ ತಮ್ಮ ಸ್ವಂತದ ೧.೫೨ ಎಕರೆಯಷ್ಟು ಫಲವತ್ತಾದ ಸಮೃದ್ಧ ಭೂಮಿಯನ್ನು ಆಶ್ರಮ ಪ್ರಾರಂಭಿಸಲು ದಾನವಾಗಿ ನೀಡಿದರು. ೧೯೨೭ ರ ಫೆಬ್ರವರಿ ೭ ರಂದು ಸೋಮವಾರದಂದು ಸ್ವಾಮಿ ನಿರ್ಮಲಾನಂದರು ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಶಂಕುಸ್ಥಾಪನೆ ನೆರವೇರಿಸಿದರು. ಅಚ್ಚಿಯಂಡ ಕಾಳಯ್ಯ ಅವರ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಆಶ್ರಮ ನಿರ್ಮಾಣ ಕೆಲಸ ಆರಂಭವಾಯಿತು. ನಂತರ ಬೆಂಗಳೂರಿನ ರಾಮಕೃಷ್ಣ ಆಶ್ರಮದಲ್ಲಿ ಸೇವೆ ಸಲ್ಲಿಸುತ್ತಿದ್ದ ಯುವ ಸನ್ಯಾಸಿ ಸ್ವಾಮಿ ಶಾಂಭವಾನAದರಿಗೆ (ಇವರ ಪೂರ್ವಾಶ್ರಮದ ಹೆಸರು ತೇಲಪಂಡ ಚೆಂಗಪ್ಪ, ವೀರಾಜಪೇಟೆ ತಾಲೂಕಿನ ಹಾಲುಗುಂದ ಗ್ರಾಮದವರು) ಸ್ವಾಮಿ ನಿರ್ಮಲಾನಂದರು ಪೊನ್ನಂಪೇಟೆ ಆಶ್ರಮದ ನಿರ್ಮಾಣದ ಜವಾಬ್ದಾರಿ ಯನ್ನು ವಹಿಸಿದರು. ಶಾಂಭವಾನAದರಿಗೆ ಪೊನ್ನಂಪೇಟೆ ಸಮೀಪದ ಮತ್ತೂರಿನ ಪುತ್ತಾಮನೆ ಮುದ್ದಮಯ್ಯ ಅವರ ನಿವಾಸದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಯಿತು. ಶಾಂಭವಾನAದರ ಅವಿರತ ಪರಿಶ್ರಮ ಹಿತೈಷಿಗಳು, ಗಣ್ಯರು ಹಾಗೂ ಸ್ಥಳೀಯರ ನೆರವಿನಿಂದ ಆಶ್ರಮದ ನಿರ್ಮಾಣವಾಯಿತು. ಆಶ್ರಮದಲ್ಲಿ ಪೂಜಾ ಮಂದಿರ, ಪ್ರಾರ್ಥನಾ ಮಂದಿರ, ಎರಡು ಕೊಠಡಿಗಳು, ಅಡುಗೆ ಮನೆ ಮಾತ್ರ ಇದ್ದವು. ಆಶ್ರಮದ ನಿರ್ಮಾಣ ಕಾರ್ಯವು ನಾಲ್ಕು ತಿಂಗಳುಗಳಲ್ಲಿ ಪೂರ್ಣಗೊಂಡಿತು. ೧೯೨೭ ರ ಜೂನ್ ೧೦ ರಂದು ಸ್ವಾಮಿ ನಿರ್ಮಲಾನಂದರು ಪೊನ್ನಂಪೇಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿದ್ದ ಶ್ರೀ ರಾಮಕೃಷ್ಣ ಶಾರದಾಶ್ರಮವನ್ನು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು. ರಾಮಕೃಷ್ಣ ಮಠ ಮತ್ತು ಮಿಷನ್‌ನ ಈ ನೂತನ ಕೇಂದ್ರಕ್ಕೆ ಕೊಡಗಿನವರೇ ಆದ ಸ್ವಾಮಿ ಶಾಂಭವಾನAದರನ್ನ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಆರಂಭಿಕ ದಿನಗಳಲ್ಲಿ ಆಶ್ರಮದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ ದಿದ್ದರೂ ಹಿತೈಷಿಗಳ, ಭಕ್ತರ ಸಹಾಯ ಹಾಗೂ ಸ್ವಾಮಿ ಶಾಂಭವಾನAದರ ಪರಿಶ್ರಮದಿಂದ ಆಶ್ರಮ ಉತ್ತಮವಾಗಿ ಕಾರ್ಯನಿರ್ವಹಿಸತೊಡಗಿತು. ಆಶ್ರಮದ ಬೆಳವಣಿಗೆಗೆ ಕೆ. ಎನ್. ಚೆಂಗಪ್ಪ, ಎ. ಎಂ. ಮುತ್ತಪ್ಪ, ಮುದ್ದಮಯ್ಯ, ಕಾಳಮಯ್ಯ ಇವರುಗಳ ನೆರವು ಕೂಡ ಸ್ಮರಣೀಯವಾದುದು.
ಆಶ್ರಮವನ್ನು ಮುನ್ನಡೆಸಿದ ಅಧ್ಯಕ್ಷರುಗಳು ಮತ್ತು ಸೇವಾಕಾರ್ಯಗಳು: ಪೊನ್ನಂಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮಲೇರಿಯಾ ಉಲ್ಬಣ ವಾಗಿದ್ದ ಕಾಲವದು. ಈ ಸಮಯದಲ್ಲಿ ಸ್ವಾಮಿ ಶಾಂಭವಾನAದರು ಹಳ್ಳಿಗಳಿಗೆ ಭೇಟಿಕೊಟ್ಟು ಸ್ಥಳೀಯ ಭಾಷೆಗಳಲ್ಲಿ ಕಾಯಿಲೆಗಳ ಬಗ್ಗೆ ಎಚ್ಚರಿಕೆ ಯಿಂದಿರುವ ಹಾಡುಗಳನ್ನು ರಚಿಸಿ ಜಾಗೃತಿ ಮೂಡಿಸಿದರು. ರೋಗಿಗಳಿಗೆ ಔಷಧಗಳನ್ನು ಉಚಿತವಾಗಿ ಹಂಚಿದರು. ೧೯೩೮ ರಲ್ಲಿ ವೀರಾಜಪೇಟೆಯಲ್ಲಿ ‘‘ದಿ ಕೂರ್ಗ್ ಹನಿ ಅಂಡ್ ವ್ಯಾಕ್ಸ್ ಪ್ರೊಡ್ಯೂಸರ್ಸ್ ಕೋ ಆಪರೇಟಿವ್ ಮಾರ್ಕೆಟಿಂಗ್ ಸೊಸೈಟಿ’’ ಯನ್ನು ಪ್ರಾರಂಭಿಸಿ ಅಲ್ಲಿನ ಜನರಿಗೆ ವೈಜ್ಞಾನಿಕವಾಗಿ ಜೇನು ಕೃಷಿಯನ್ನು ಮಾಡಲು ಪ್ರೋತ್ಸಾಹಿಸಿದರು. ಇವರು ೧೯೪೦ ರಲ್ಲಿ ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿ ನಿಯೋಜಿತ ರಾದ ನಂತರ ಪೊನ್ನಂಪೇಟೆ ಆಶ್ರಮದ ಅಧ್ಯಕ್ಷರಾಗಿ ಸ್ವಾಮಿ ಪ್ರಣವೇಶಾನಂದ ರನ್ನು ನೇಮಿಸಲಾಯಿತು. ಇವರೂ ಕೂಡ ತಮ್ಮ ಸೇವಾ ಅವಧಿಯಲ್ಲಿ ಉಚಿತ ಔಷಧಾಲಯ, ಹೆಣ್ಣು ಮಕ್ಕಳಿಗಾಗಿ ವಸತಿ ಗೃಹ ಇನ್ನಿತರ ಸೇವಾ ಕಾರ್ಯವನ್ನು ಮಾಡಿದರು. ಇವರ ನಂತರ ಸ್ವಾಮಿ ವಿಶ್ವಂಭರಾನAದರು ಆಶ್ರಮದ ಜವಾಬ್ದಾರಿಯನ್ನು ವಹಿಸಿಕೊಂಡು ಸೇವಾ ಚಟುವಟಿಕೆಗಳನ್ನು ವಿಸ್ತರಿಸಿದರು. ಔಷಧಾಲಯಕ್ಕಾಗಿ ಒಂದು ಕಟ್ಟಡವನ್ನು ಕಟ್ಟಿದರು ಹೋಮಿಯೋಪತಿ ಔಷಧಾಲಯವನ್ನು ವಿಸ್ತರಿಸಿದರು. ಸ್ವಾಮಿ ವಿಶ್ವಂಭರಾನAದರು ೧೯೫೮ ರಲ್ಲಿ ಆಶ್ರಮದ ಆರ್ಥಿಕ ವ್ಯವಸ್ಥೆಯನ್ನು ಸುಸ್ಥಿರಗೊಳಿಸಲು ಕಾಫಿ ತೋಟವನ್ನು ಬೆಳೆಸಿ ಅದರ ಆದಾಯವನ್ನು ಸೇವಾ ಕಾರ್ಯಗಳಿಗೆ ಬಳಸುತ್ತಿದ್ದರು. ಶ್ರೀ ರಾಮಕೃಷ್ಣ ಸೇವಾಶ್ರಮ ಎಂಬ ಆಸ್ಪತ್ರೆಯನ್ನು ಪ್ರಾರಂಭಿಸಿದರು. ಸರ್ಕಾರದ ಸಹಾಯದೊಂದಿಗೆ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಕೇಂದ್ರವನ್ನು ತೆರೆದರು. ಇವರ ನಂತರ ಸ್ವಾಮಿ ಅಮಿತಾ ನಂದರು ಮತ್ತು ಶ್ರೀದಾನಂದರು, ಕ್ರಮವಾಗಿ ಆಶ್ರಮದ ಅಧ್ಯಕ್ಷರಾಗಿ ಸೇವಾ ಕಾರ್ಯಗಳನ್ನು ಕೈಗೊಂಡರು. ೧೯೮೩ ರಲ್ಲಿ ಸ್ವಾಮಿ ಸಂಪ್ರಜ್ಞಾನAದರು ಆಶ್ರಮದ ಅಧ್ಯಕ್ಷರಾಗಿ ನೇಮಕಗೊಂಡು ಆಶ್ರಮದ ವೈದ್ಯಕೀಯ ಸೇವಾ ಕಾರ್ಯಗಳನ್ನು ವಿಸ್ತರಿಸಿದರು.
೧೯೮೬ ರಲ್ಲಿ ವೀತಮೋಹಾನಂದ ಅವರು ಆಶ್ರಮದ ಉಸ್ತುವಾರಿ ವಹಿಸಿ ಕೊಂಡು ಯುವ ಸಮ್ಮೇಳನಗಳು ಆಧ್ಯಾತ್ಮಿಕ ಶಿಬಿರಗಳು ಇನ್ನಿತರ ಕಾರ್ಯಕ್ರಮ ಗಳನ್ನು ಆಯೋಜಿಸಿದರು. ೧೯೮೯ ರಲ್ಲಿ ಇವರ ನೇತೃತ್ವದಲ್ಲಿ ಆಶ್ರಮದ ವಜ್ರ ಮಹೋತ್ಸವವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲಾಯಿತು. ಇವರ ನಂತರ ಸ್ವಾಮಿ ಸುಖಾತ್ಮಾನಂದರು ಹಾಗೂ ಸ್ವಾಮಿ ಕಮಲಾನಂದರು ಆಶ್ರಮದ ಜವಾಬ್ದಾರಿಯನ್ನು ವಹಿಸಿಕೊಂಡು ಸೇವಾ ಕಾರ್ಯಗಳನ್ನು ಮುಂದುವರೆಸಿದರು.
೧೯೯೩ ರಲ್ಲಿ ಸ್ವಾಮಿ ಪುರುಷೋತ್ತಮಾ ನಂದರನ್ನು ಆಶ್ರಮದ ಅಧ್ಯಕ್ಷರಾಗಿ ನೇಮಿಸಲಾಯಿತು. ಇವರ ಅವಧಿಯಲ್ಲಿ ಆಶ್ರಮದ ಸುತ್ತ ಗೋಡೆ, ಅಡುಗೆ ಮನೆ, ಸಾಧು ನಿವಾಸ, ಸಂದರ್ಶಕರ ಕೊಠಡಿ, ದೇವಸ್ಥಾನ ಗೋಡೆಗಳ ಮರು ನಿರ್ಮಾಣ ಕಾರ್ಯಗಳು ನಡೆದವು. ಸ್ವಾಮಿ ಪುರುಷೋತ್ತಮಾನಂದ ರಿಂದ ಪ್ರಭಾವಿತರಾಗಿ ಕರ್ನಾಟಕದ ವಿವಿಧೆಡೆಗಳಿಂದ ಅನೇಕ ಯುವಕರು ಆಶ್ರಮದ ಬ್ರಹ್ಮಚಾರಿಗಳಾಗಿ ಸೇರಿ, ಆಶ್ರಮದ ಸೇವಾ ಕಾರ್ಯದಲ್ಲಿ ತೊಡಗಿಕೊಂಡರು. ೨೦೦೦ ನವೆಂಬರ್‌ನಲ್ಲಿ ಸ್ವಾಮಿ ಜಗದಾತ್ಮಾನಂದರು ಆಶ್ರಮದ ಜವಾಬ್ದಾರಿಯನ್ನ ವಹಿಸಿಕೊಂಡರು. ಇವರ ಅವಧಿಯಲ್ಲಿ ಬುಡಕಟ್ಟು ಜನರ ಸುಧಾರಣೆಗಾಗಿ ಯೋಜನೆಗಳನ್ನು ಹಮ್ಮಿಕೊಂಡು, ಯಶಸ್ವಿಯಾಗಿ ನಿರ್ವಹಿಸಿದರು. ೨೦೦೨ ರಲ್ಲಿ ಆಶ್ರಮದ ಅಮೃತ ಮಹೋತ್ಸವ ಆಚರಿಸಲಾಯಿತು. ೨೦೦೪ ರಲ್ಲಿ ಸಭಾಂಗಣವನ್ನು ನಿರ್ಮಾಣ ಮಾಡಿ, ಸಭಾಂಗಣಕ್ಕೆ ಸ್ವಾಮಿ ಶಾಂಭವಾನAದ ಸ್ಮಾರಕ ಸಭಾಂಗಣವೆAದು ನಾಮಕರಣ ಮಾಡಲಾಯಿತು.
ವಿಶ್ವ ಭಾವೈಕ್ಯ ಮಂದಿರ ನಿರ್ಮಾಣ : ಸ್ವಾಮಿ ಜಗದಾತ್ಮಾನಂದರು ನೂತನ ಭಾವೈಕ್ಯ ಮಂದಿರದ ಯೋಜನೆ ಯನ್ನು ರೂಪಿಸಿದರು. ಈ ಕಾರ್ಯ ದಲ್ಲಿ ಅವರಿಗೆ ಸಹಕರಿಸಲು ಕೇಂದ್ರ ಸ್ಥಾನದಿಂದ ಸ್ವಾಮಿ ಬೋದ ಸ್ವರೂಪಾನಂದರನ್ನು ಪೊನ್ನಂಪೇಟೆಗೆ ಕಳುಹಿಸಿಕೊಡಲಾಯಿತು. ೨೦೦೮ ರ ಫೆಬ್ರವರಿ ೨೪ ರಂದು ನೂತನ ಮಂದಿರಕ್ಕೆ ಶಿಲನ್ಯಾಸ ನೆರವೇರಿಸ ಲಾಯಿತು. ಅನೇಕ ದಾನಿಗಳ ನೆರವಿನಿಂದ, ಆಶ್ರಮದ ಸಾಧುಸಂತರ ಅವಿರತ ಪರಿಶ್ರಮ ಹಾಗೂ ದೇಣಿಗೆ ಗಳ ಸಂಗ್ರಹದಿAದ ಮಂದಿರ ನಿರ್ಮಾಣ ಕಾರ್ಯಪೂರ್ಣಗೊಂಡಿತು. ೨೦೦೬ ರ ಅಕ್ಟೋಬರ್ ತಿಂಗಳಲ್ಲಿ ಶ್ರೀ ರಾಮಕೃಷ್ಣರ ವಿಶ್ವಭಾವೈಕ್ಯ ಮಂದಿರದ ಉದ್ಘಾಟನೆಯನ್ನು ರಾಮಕೃಷ್ಣ ಮಹಾಸಂಘದ ಅಂದಿನ ಅಧ್ಯಕ್ಷರಾಗಿದ್ದ ಸ್ವಾಮಿ ಆತ್ಮಸ್ಥಾನಂದಜೀ ಮಹಾರಾಜ್ ಅವರು ನೆರವೇರಿಸಿದರು.
ಸ್ವಾಮಿ ಬೋಧ ಸ್ವರೂಪಾನಂದರ ಸೇವಾ ಕಾರ್ಯ : ೨೦೧೦ ರಲ್ಲಿ ಸ್ವಾಮಿ ಬೋಧ ಸ್ವರೂಪಾನಂದರನ್ನು ಪೊನ್ನಂಪೇಟೆ ಆಶ್ರಮದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಇವರ ಅವಧಿಯಲ್ಲಿ ಆಶ್ರಮದ ಸೇವಾ ಕಾರ್ಯಗಳು ಉತ್ತುಂಗ ಸ್ಥಿತಿಗೇರಿದವು. ಇವರ ಅವಧಿಯಲ್ಲಿ ನ್ಯಾಚುರೋಪತಿ ಮತ್ತು ಪಿಸಿಯೋಥೆರಪಿಯ ನೂತನ ಕೇಂದ್ರಗಳ ಸ್ಥಾಪನೆಯಾಯಿತು. ಶ್ರೀಮಾತೆ ಶಾರದಾದೇವಿಯವರ ಪಾದ ಧೂಳಿಯನ್ನು ಬೇಲೂರು ಮಠದಿಂದ ತಂದು ಆಶ್ರಮದಲ್ಲಿ ಪ್ರತಿಷ್ಠಾಪಿಸಲಾಯಿತು. ವಿವೇಕಾನಂದರ ಆರೋಗ್ಯಧಾಮವನ್ನು ನಿರ್ಮಿಸಲಾಯಿತು. ಆಸ್ಪತ್ರೆಯ ನವೀಕರಣ, ಆಧುನಿಕ ಉಪಕರಣ, ಲ್ಯಾಬೋರೇಟರಿ, ಸ್ವಾಮಿ ವಿವೇಕಾನಂದರ ಸಾಂಸ್ಕೃತಿಕ ಕೇಂದ್ರ, ಅಧ್ಯಯನ ಕೊಠಡಿ ಗ್ರಂಥಾಲಯ, ಕಂಪ್ಯೂಟರ್ ಕೇಂದ್ರ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದವು. ದಾನಿಗಳಿಂದ ಕೋಟ್ಯಂತರ ರೂಪಾಯಿ ಹಣವನ್ನು ಕ್ರೋಢೀಕರಿಸಿ ಈ ಕಾರ್ಯಗಳನ್ನು ನೆರವೇರಿಸಲಾಯಿತು. ಬೋಧಸ್ವರೂಪಾನಂದರ ಅವಧಿಯಲ್ಲಿ ೨೦೧೧ರಿಂದ ೨೦೧೪ ರವರೆಗೆ ಸ್ವಾಮಿ ವಿವೇಕಾನಂದರ ೧೫೦ ನೇ ಜನೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ತರಬೇತಿ, ಪೌಷ್ಟಿಕ ಆಹಾರ, ಹಾಲು, ಸಮವಸ್ತç, ಶೌಚಾಲಯ ನಿರ್ಮಾಣ ಟೈಲರಿಂಗ್ ತರಬೇತಿ ಹಾಗೂ ಹೊಲಿಗೆಯಂತ್ರ ವಿತರಣೆ, ಶೌಚಾಲಯ ನಿರ್ಮಾಣಕ್ಕೆ ಪರಿಶಿಷ್ಟ ವರ್ಗದ ಜನಾಂಗಕ್ಕೆ ತಲಾ ೫,೦೦೦ ಧನ ಸಹಾಯ ನೀಡಲಾಯಿತು. ಕೃಷ್ಣ ಕಾಲೋನಿಯನ್ನ ದತ್ತು ಪಡೆದು ಅಲ್ಲಿ ಕುಡಿಯುವ ನೀರು, ಶೌಚಾಲಯ ನಿರ್ಮಾಣ ಮಾಡಲಾಯಿತು. ಗಡಿ ಪ್ರದೇಶ ಪ್ರಾಧಿಕಾರದ ಸಹಯೋಗದೊಂದಿಗೆ ರೇಷ್ಮೆಹಡ್ಲುವಿನಲ್ಲಿ ೧೪ ಲಕ್ಷ ರೂ. ವಿನಿಯೋಗಿಸಿ ವಿವೇಕಾನಂದರ ಸಾಂಸ್ಕೃತಿಕ ಭವನ ನಿರ್ಮಾಣ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಲೇಖನ ಸಾಮಗ್ರಿ ವಿತರಣೆ, ಸಾವಿರಾರು ಸಂಖ್ಯೆಯಲ್ಲಿ ಬಡವರಿಗೆ ಕಂಬಳಿ ವಿತರಣೆ, ವಿದ್ಯಾರ್ಥಿವೇತನ ವಿತರಣೆ ಸೇರಿದಂತೆ ಬಹುಪಯೋಗಿ ಸೇವಾ ಕಾರ್ಯ ನಡೆಸಲಾಯಿತು. ಪ್ರಕೃತಿ ವಿಕೋಪದಲ್ಲಿ ಸಿಲುಕಿದ ಅನೇಕ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಮಾದಾಪುರ ಹಾಗೂ ಪೊನ್ನಂಪೇಟೆಗಳಲ್ಲಿ ಟೈಲರಿಂಗ್ ತರಬೇತಿ ನೀಡಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ಒದಗಿಸಲಾಯಿತು. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೩೩ ಲಕ್ಷ ವೆಚ್ಚದಲ್ಲಿ ಸ್ವಾಮಿ ವಿವೇಕಾನಂದರ ಸಾಂಸ್ಕೃತಿಕ ಕೇಂದ್ರ ನಿರ್ಮಾಣ ಮಾಡಲಾಯಿತು. ಬೋಧ ಸ್ವರೂಪನಂದರು ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ಜಿಲ್ಲೆಯ ಮೂಲೆ ಮೂಲೆಗಳಿಗೂ ತೆರಳಿ ಕೋಟಿ ರೂಪಾಯಿಗೂ ಅಧಿಕ ಪ್ರಮಾಣದಲ್ಲಿ ನೊಂದ ಕುಟುಂಬಗಳಿಗೆ ಆಹಾರ ಸಾಮಗ್ರಿ ಸೇರಿದಂತೆ ಅಗತ್ಯ ವಸ್ತುಗಳನ್ನ ತಲುಪಿಸಿ ದರು. ಹಾಡಿಗಳ ಜನರಿಗೆ ಮಳೆಗಾಲಕ್ಕೆ ಅನುಕೂಲವಾಗುವಂತೆ ಟಾರ್ಪಲ್‌ಗಳನ್ನು ವಿತರಿಸಲಾಯಿತು. ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದವರಿಗೆ ಆಹಾರ ಸಾಮಗ್ರಿ ಕಿಟ್‌ಗಳನ್ನು ವಿತರಿಸಿದರು. ಸಂಕಷ್ಟಕ್ಕೆ ಒಳಗಾಗಿದ್ದ ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಅದನ್ನು ಜನರಿಗೆ ಹಂಚಿದರು. ಈ ಮೂಲಕ ಅವರ ಬದುಕಿಗೂ ನೆರವಾದರು. ಇವರ ಅವಧಿಯಲ್ಲಿ ಇನ್ನೂ ಅನೇಕ ಸೇವಾಕಾರ್ಯಗಳ ಮೂಲಕ ಇವರು ಜನರಿಗೆ ಹತ್ತಿರವಾದರು. ಒಟ್ಟಿನಲ್ಲಿ ರಾಮಕೃಷ್ಣ ಆಶ್ರಮದ ಪಾಲಿಗೆ ಬೋಧ ಸ್ವರೂಪಾನಂದರ ಆಡಳಿತದ ಅವಧಿ ಸುವರ್ಣ ಯುಗ ಎಂದು ಹೇಳಬಹುದು. ಬೋಧಸ್ವರೂಪಾನಂದರು ಮಠಕ್ಕೆ ವರ್ಗಾವಣೆಯಾದ ನಂತರ ೨೦೨೧ ರಿಂದ ಸ್ವಾಮಿ ಅಮೂರ್ತ ನಂದರು ಆಶ್ರಮದ ಅಧ್ಯಕ್ಷರಾದರು. ಪ್ರಸ್ತುತ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿ ಸ್ವಾಮಿ ತತ್ವರೂಪಾನಂದಜೀ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮ ೧೯೨೭ ರಿಂದ ಇದುವರೆಗೂ ಆಧ್ಯಾತ್ಮಿಕ ಸಹಾಯ ಮತ್ತು ಸಾಮಾಜಿಕ ಸುಧಾರಣೆಯ ಮೂಲಕ ಅನೇಕ ಸಾಧು ಸಂತರ ಉಪಸ್ಥಿತಿಯಿಂದ ಪುನೀತವಾಗಿದೆ. ಸ್ವಾಮಿ ವಿವೇಕಾನಂದರ ಸಂದೇಶವನ್ನು ಮುಂದಕ್ಕೆ ಕೊಂಡೊಯ್ಯುವ ಪ್ರಜ್ವಲಿಸುವ ದಾರಿದೀಪವಾಗಿ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮವು ಮುಂದುವರಿಯುತ್ತಿದೆ. (ಮುಂದುವರಿಯುವುದು)
-ಚನ್ನನಾಯಕ, ಪೊನ್ನಂಪೇಟೆ.