ಮಡಿಕೇರಿ, ಫೆ. ೨೩: ನಗರದ ಮಹದೇವಪೇಟೆಯ ಡಾ. ಅಬ್ದುಲ್ ಕಲಾಂ ಸೌಹಾರ್ದ ಸಮಿತಿಯ ವತಿಯಿಂದ ತಾ. ೨೬ ರಂದು ಅಬ್ದುಲ್ ಕಲಾಂ ಬಡಾವಣೆಯಲ್ಲಿ ೪ನೇ ವರ್ಷದ ಸೌಹಾರ್ದ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ ೯.೩೦ ಗಂಟೆಗೆ ಸಮಿತಿಯ ಅಧ್ಯಕ್ಷ ಎಂ.ಎ. ಸಾದಿಕ್ ಸಾಧು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ನಗರಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ಉದ್ಘಾಟಿಸಲಿರುವರು. ಕ್ರೀಡಾಕೂಟವನ್ನು ನಗರಸಭಾ ಸದಸ್ಯ ಅಮೀನ್ ಮೊಹಿಸಿನ್ ಉದ್ಘಾಟಿಸಲಿದ್ದಾರೆ.
ಸಂಜೆ ೪.೩೦ ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸುನಿಲ್ ಸುಬ್ರಮಣಿ, ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ನಗರಸಭೆಯ ಉಪಾಧ್ಯಕ್ಷೆ ಸವಿತಾ ರಾಕೇಶ್ ಅವರು ಭಾಗವಹಿಸುವರು.
ಅಂದಿನ ಸಮಾರಂಭದಲ್ಲಿ ಅಬ್ದುಲ್ ಕಲಾಂ ಸೌಹಾರ್ದ ಸಮಿತಿಯ ಮಾಜಿ ಅಧ್ಯಕ್ಷ ಪಾಡೆಯಂಡ ಮಣಿ ಮೇದಪ್ಪ, ಬಡಾವಣೆಯ ಹಿರಿಯರಾದ ಎಂ.ಜಿ. ಯೂಸೂಪ್, ಸಮಾಜ ಸೇವಾ ಕಾರ್ಯಕರ್ತ ಯದು ಕುಮಾರ್ ಕುಯ್ಯಮುಡಿ ಹಾಗೂ ನಗರಸಭಾ ಸಿಬ್ಬಂದಿ ಎಂ.ಎ. ಅಬ್ದುಲ್ ಅಜೀಜ್ ಅವರನ್ನು ಸನ್ಮಾನಿಸಲಾಗುವುದು.
ದಿನದ ಅಂಗವಾಗಿ ಬಡಾವಣೆಯ ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆ ಹಾಗೂ ಸಂಜೆ ವಿಕ್ರಂ ಜಾದೂಗಾರ್ ಅವರಿಂದ ಜಾದೂ ಪ್ರದರ್ಶನ ಹಾಗೂ ಮಧ್ಯಾಹ್ನ ೨ ಗಂಟೆಗೆ ನಗರದ ಶಿವು ಮತ್ತು ತಂಡದವರಿAದ ಸಂಗೀತಗೋಷ್ಠಿ ಏರ್ಪಡಿಸಲಾಗಿದೆ ಎಂದು ಬಡಾವಣೆ ಸೌಹಾರ್ದ ಸಮಿತಿ ಪ್ರಧಾನ ಕಾರ್ಯದರ್ಶಿ ಬೈ.ಶ್ರೀ. ಪ್ರಕಾಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾ ಸಮಿತಿ ಅಧ್ಯಕ್ಷ ಪಾಡೆಯಂಡ ಮಣಿ ಮಾದಪ್ಪ ಹಾಗೂ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಂ.ಎ. ನಾಸಿರ್ ಅಹಮ್ಮದ್ ಭಾಗವಹಿಸಲಿದ್ದಾರೆ.