ಪೊನ್ನAಪೇಟೆ, ಫೆ.೨೩: ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ವೀರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಗುರುವಾರದಂದು ತೀತಿಮಾಡ, ಕುಪ್ಪಂಡ, ಚಂದೂರ, ನಾಮೆರ ಮತ್ತು ನಂಬುಡುಮಾಡ ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆ.

ದಿನದ ಪ್ರಥಮ ಪಂದ್ಯದಲ್ಲಿ ತೀತಿಮಾಡ ತಂಡವು ಕರ್ತಮಾಡ ತಂಡವನ್ನು ೪-೦ಗೋಲುಗಳಿಂದ ಮಣಿಸಿತು. ವಿಜೇತ ತಂಡದ ಪರ ಅತಿಥಿ ಆಟಗಾರ ಬೋಪಣ್ಣ ೭ನೇ ಮತ್ತು ೧೯ನೇ ನಿಮಿಷದಲ್ಲಿ, ಮತ್ತೋರ್ವ ಆಟಗಾರ ಬಿದ್ದಪ್ಪ ೩೫ನೇ ಮತ್ತು ೩೭ನೇ ನಿಮಿಷದಲ್ಲಿ ಗೋಲು ಬಾರಿಸಿದರು. ೨ನೇ ಪಂದ್ಯದಲ್ಲಿ ಕುಪ್ಪಂಡ ತಂಡವು ಗುಮ್ಮಟ್ಟಿರ ತಂಡವನ್ನು ೧-೦ ಗೋಲುಗಳಿಂದ ಸೋಲಿಸಿತು. ವಿಜೇತ ತಂಡಕ್ಕೆ ದೊರೆತ ಪೆನಾಲ್ಟಿ ಕಾರ್ನರ್ ಅನ್ನು ಅತಿಥಿ ಆಟಗಾರ ಅಯ್ಯಪ್ಪ ೧೫ನೇ ನಿಮಿಷದಲ್ಲಿ ಗೋಲಾಗಿ ಪರಿವರ್ತಿಸಿ ತಂಡದ ವಿಜಯಕ್ಕೆ ನೆರವಾದರು.

೩ನೇ ಪಂದ್ಯದಲ್ಲಿ ಚಂದೂರ ತಂಡವು ಪಟ್ರಂಗಡ ತಂಡವನ್ನು ೪-೨ ಗೋಲುಗಳಿಂದ ಪರಾಭವಗೊಳಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ವಿಜೇತ ತಂಡದ ಪರ ಅತಿಥಿ ಆಟಗಾರ ನಾಚಪ್ಪ ೪ನೇ, ೧೭ನೇ ಮತ್ತು ೩೩ನೇ ನಿಮಿಷದಲ್ಲಿ ಗೋಲು ಬಾರಿಸಿ ಹ್ಯಾಟ್ರಿಕ್ ಸಾಧನೆಯೊಂದಿಗೆ ತಂಡದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ತಂಡದ ಮತ್ತೋರ್ವ ಅತಿಥಿ ಆಟಗಾರ ಮೋಕ್ಷಿತ್ ೩೮ನೇ ನಿಮಿಷದಲ್ಲಿ ಗೋಲು ಹೊಡೆದರು. ಪರಾಜಿತ ತಂಡದ ಪರ ಅತಿಥಿ ಆಟಗಾರ ಸೋಮಣ್ಣ ಮೊದಲ ನಿಮಿಷದಲ್ಲಿ ಮತ್ತು ೩೫ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

೪ನೇ ಪಂದ್ಯದಲ್ಲಿ ನಾಮೆರ ತಂಡವು ಕಂಜಿತAಡ ತಂಡವನ್ನು ಒಟ್ಟು ೬-೫ ಗೋಲುಗಳಿಂದ ಮಣಿಸಿತು. ಕಂಜಿತAಡ ತಂಡದ ಪರವಾಗಿ ೩ನೇ ನಿಮಿಷದಲ್ಲಿ ಚಿಂಗಪ್ಪ ಮತ್ತು ನಾಮೆರ ತಂಡದ ಪರವಾಗಿ೧೫ನೇ ನಿಮಿಷದಲ್ಲಿ ಅತಿಥಿ ಆಟಗಾರ ಅಮೋಘ್ ಫೀಲ್ಡ್ ಗೋಲು ಬಾರಿಸಿ ಎರಡೂ ತಂಡಗಳ ಖಾತೆ ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದ ದ್ವಿತೀಯಾರ್ಧದ ಪಂದ್ಯ ಕೊನೆಗೊಂಡ ಸಂದರ್ಭದಲ್ಲಿ ಉಭಯ ತಂಡಗಳು ತಲಾ ಒಂದು ಗೋಲು ದಾಖಲಿಸುವ ಮೂಲಕ ಪಂದ್ಯವನ್ನು ಡ್ರಾ ಗೊಳಿಸಿದ್ದವು. ಪಂದ್ಯದ ವಿಜಯ ನಿರ್ಣಯಕ್ಕಾಗಿ ನಡೆದ ಶೂಟ್ ಔಟ್ ನಲ್ಲಿ ವಿಜೇತ ನಾಮೆರ ತಂಡ ೫ ಗೋಲುಗಳನ್ನು ಬಾರಿಸಿದರೆ, ಪರಾಜಿತ ಕಂಜಿತAಡ ತಂಡ ೪ ಗೋಲುಗಳನ್ನು ಮಾತ್ರ ಗಳಿಸಿತು. ವಿಜೇತ ತಂಡದ ಪರ ವಿಕಾಸ್, ಯತಿನ್, ಪೂವಣ್ಣ, ಜಿತನ್ ಮತ್ತು ಅಮೋಘ್ ಗೋಲು ಬಾರಿಸಿದರೆ, ಪರಾಜಿತ ತಂಡದ ಪರ ಚಿಂಗಪ್ಪ, ಸೋಮಣ್ಣ, ಪುನೀತ್ ಮತ್ತು ಬೋಪಯ್ಯ ಗೋಲು ಹೊಡೆದರು.

ದಿನದ ಕೊನೆಯ ಪಂದ್ಯದಲ್ಲಿ ನಂಬುಡುಮಾಡ ತಂಡ ಕೋಲತಂಡ ತಂಡವನ್ನು ೩-೧ ಗೋಲುಗಳಿಂದ ಮಣಿಸಿತು. ವಿಜೇತ ತಂಡದ ಪರ ೧೬ನೇ ನಿಮಿಷದಲ್ಲಿ ಅಶ್ವಿನ್, ೨೧ನೇ ನಿಮಿಷದಲ್ಲಿ ನಿಹಾಲ್ ಮತ್ತು ೨೯ನೇ ನಿಮಿಷದಲ್ಲಿ ಅತಿಥಿ ಆಟಗಾರ ನಿತಿನ್ ಗೋಲು ಹೊಡೆದರೆ, ಕೋಲತಂಡ ತಂಡದ ಪರವಾಗಿ ಅತಿಥಿ ಆಟಗಾರ ವಿನೀಶ್ ೨೮ನೇ ನಿಮಿಷದಲ್ಲಿ ಗೋಲು ಬಾರಿಸಿದರು.

-ರಫೀಕ್ ತೂಚಮಕೇರಿ