ತ್ರಿಮೂರ್ತಿಯರಲ್ಲಿ ಒಬ್ಬನಾದ ಶಿವನು ಅನನ್ಯನು. ಅವನ ನಾನಾ ಅವತಾರ ವಿಚಿತ್ರ... ಹಾಗೆ ಅಭಯಂಕರನೂ ನಿರಾಕಾರನು. ಅವನ ಆದಿ ಅಂತ್ಯವನ್ನು ಕಂಡವರಿಲ್ಲ. ಅವನ ಪ್ರೇರಣೆ ಇಲ್ಲದೆ ಒಂದು ಹುಲ್ಲುಕಡ್ಡಿಯೂ ಅಲ್ಲಾಡಲು ಅಸಾಧ್ಯ.
ಬೆಟ್ಟತ್ತೂರು ಎಂಬುವುದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕು ಭಾಗಮಂಡಲ ಹೋಬಳಿಯ ಒಂದು ಕುಗ್ರಾಮ. ಹಿಂದಿನ ಕಾಲದಲ್ಲಿ ವಾಹನ ಸೌಕರ್ಯ ಹೋಗಲಿ, ಸರಿಯಾದ ರಸ್ತೆಯು ಇರಲಿಲ್ಲ. ಅಷ್ಟೊಂದು ಇಕ್ಕಟ್ಟಿನ ಬೆಟ್ಟಗುಡ್ಡದ ಜಾಗವಾಗಿತ್ತು. ಆ ಕಾಲದಲ್ಲಿ ಜನರೆಲ್ಲಾ ಕೆಲಸ ಕಾರ್ಯಗಳಿಗೆಲ್ಲಾ ೧೦-೧೫ ಮೈಲಿ ಕಾಲ್ನಡಿಗೆಯಲ್ಲಿ ಪೇಟೆಗೆ ಬರಬೇಕಿತ್ತು.
ಪುರಾತನ ಕಾಲದಲ್ಲಿ ಈ ಊರಿನ ಸೌಂದರ್ಯಕ್ಕೆ ಮಾರುಹೋಗಿ ಶಿವ, ಪಾರ್ವತಿ, ಸುಬ್ರಹ್ಮಣ್ಯ ಸಮೇತ ಬಂದಿದ್ದರೆನ್ನಲಾಗಿದೆ. ಶಿವನು ಬೆಟ್ಟತ್ತೂರಿನಲ್ಲಿ ಮಾದೂರಪ್ಪನಾಗಿ ನೆಲೆನಿಂತಿದ್ದಾನೆ. ಶಿವ ನಿಂತ ಕಾಡಿಗೆ ನೀರುಳ್ಳಿ ಬನ ಎನ್ನುತ್ತಾರೆ. ಹಾಗೆ ದೇವಿಯೊಂದಿಗೆ ನೀನು ಪಾಕದಲ್ಲಿ ವನದುರ್ಗಿಯಾಗಿ ನೆಲೆನಿಂತು ಊರು, ನಾಡು, ದೇಶದ ಜನರನ್ನು ಕಾಪಾಡು... ನಾನು ಮತ್ತು ಮಗ ಇಲ್ಲಿದ್ದು ಎಲ್ಲರನ್ನೂ ರಕ್ಷಿಸುತ್ತೇವೆ. ಹಾಗೆಯೇ ನಾನು ಇಲ್ಲಿಂದಲೇ ನಿನ್ನನ್ನು ನೋಡುತ್ತಿರುತ್ತೇನೆ. ಊರಿನವರು ಮೊದಲು ನಿನ್ನ ಹಬ್ಬ ಮಾಡಿದ ತರುವಾಯ ನನ್ನ ಬಳಿಗೆ ಬರಲಿ. ತದನಂತರ ಸುಬ್ರಮಣ್ಯನಿಗೆ ಪೂಜೆ ಮಾಡಲಿ ಎಂದು ಹರಸಿದರಂತೆ. ಈಗಲೂ ನೀರುಳ್ಳಿ ಬನಕ್ಕೆ ಯಾರೂ ಪ್ರವೇಶ ಮಾಡುವುದಿಲ್ಲ. ಯಾರಾದರೂ ಒಳಗೆ ಪ್ರವೇಶ ಮಾಡಿದರೆ ದಾರಿ ತಪ್ಪುತ್ತಾರೆ ಎಂಬ ವದಂತಿ ಇದೆ.
ಮಹಾಮಾಯೆ ಪಾಕದ ವನದುರ್ಗಿಯಾಗಿ ನೆಲೆನಿಂತು ಜನರ ಕಷ್ಟ, ದನ-ಕರು, ತೋಟ, ಮಕ್ಕಳಿಲ್ಲದವರಿಗೆ ಮಕ್ಕಳ ಫಲ ಹೀಗೆ ನಾನಾ ತರದ ಭಾಗ್ಯ ಸಂಪತ್ತನ್ನು ಕೊಡುತ್ತಾ ಬಂದಿರುತ್ತಾಳೆ. ಭಯಂಕರ ಖಾಯಿಲೆಗಳು ಅಲ್ಲದೆ ಚರ್ಮರೋಗಕ್ಕೆ ಹರಕೆ ಹೇಳಿಕೊಂಡರೆ ಬೇಗನೇ ಗುಣಮುಖರಾಗುತ್ತಾರೆ ಎಂಬ ಪ್ರತೀತಿ ಇದೆ. ದೇವಿಯ ಹಬ್ಬ ಡಿಸೆಂಬರ್ ತಿಂಗಳಿನ ಸಂಕ್ರಮಣದ ದಿನದಂದು ನಡೆಯುತ್ತದೆ. ವರ್ಷಕ್ಕೆ ಒಂದು ಹಬ್ಬ. ಆದುದರಿಂದ ಆ ದಿನದಂದು ಅಪಾರ ಸಂಖ್ಯೆಯ ಜನರು ಬಂದು ಪೂಜೆ, ಹರಕೆ, ಭಂಡಾರ ಸಲ್ಲಿಸುತ್ತಾರೆ. ಅಲ್ಲಿ ದೇವಿ ಮೀನಿನ ರೂಪದಲ್ಲಿ ಬರುತ್ತಾಳೆ ಎಂದು ಮೀನಿಗೆ ಅಕ್ಕಿ ಹಾಕುವುದು ವಿಶೇಷ. ಈಗಲೂ ಆ ಹೊಳೆಯಲ್ಲಿ ಮೀನಿನ ರಾಶಿಯೆ ಇದೆ.
ಅಂದೇ ಬೆಟ್ಟತ್ತೂರಿನಲ್ಲಿ ಮಧ್ಯಾಹ್ನದ ಮೇಲೆ ಮಾದೂರಪ್ಪನ ಹಬ್ಬ ನಡೆಯುತ್ತದೆ. ಹಬ್ಬ ಆಗುವಾಗ ೧ ತಿಂಗಳು ಅಲ್ಲಿ ಮತ್ತು ಪಾಕದಲ್ಲಿ ಕಟ್ಟು ಬೀಳುತ್ತದೆ. ಮರ ಕಡಿಯಬಾರದು, ಪ್ರಾಣಿ ಹಿಂಸೆ ಮಾಡಬಾರದು, ಒಗ್ಗರಣೆ ಹಾಕಬಾರದು, ತೆಂಗಿನ ಕಾಯಿ ಒಡೆಯಬಾರದೆಂಬ ನಿಯಮ ಇದೆ. ಹಬ್ಬದಂದು ಎತ್ತು ಪೋರಾಟ ಆಗಿ ಬನಕ್ಕೆ ಮೂರು ಸುತ್ತು ಬಂದು ದೇವ ಆಟ್, ತೆಂಗೆ ಪೋರ್ ಆದ ಮೇಲೆ ತೆಂಗಿನ ಕಾಯಿಗೆ ಗುಂಡು ಹೊಡೆದು ಕಟ್ಟು ಮುರಿಯುತ್ತಾರೆ. ನಂತರ ಮಹಾಪೂಜೆ ಮಾಡಿ ಪ್ರಸಾದ ಹಂಚುತ್ತಾರೆ. ಸುಬ್ರಮಣ್ಯನಿಗೆ ಮಾರ್ಚ್ ೨, ೩ಕ್ಕೆ ತೆರೆ ಹಬ್ಬ ಮಾಡುತ್ತಾರೆ. ಹೀಗೆ ಶಿವನು ನಮ್ಮೂರಲ್ಲಿ ನೆಲೆನಿಂತ ಮಹಿಮೆ ಇದೆ.
- ಕೂಪದಿರ ಸುಂದರಿ ಮಾಚಯ್ಯ, ದೇಚೂರು, ಮಡಿಕೇರಿ, ಮೊ. ೯೭೪೨೫೨೦೫೪೨