ಕುಶಾಲನಗರ, ಫೆ. ೧೪: ಕುಶಾಲನಗರ ಸಮೀಪದ ಬೈಲುಕುಪ್ಪೆಯ ಟಿಬೇಟಿಯನ್ ನಿರಾಶ್ರಿತ ಶಿಬಿರದಲ್ಲಿ ತಾ. ೨೩ ರಿಂದ ಒಂದು ವಾರ ಕಾಲಟಿಬೇಟಿಯನ್ ಉತ್ಸವ ನಡೆಯಲಿದೆ ಎಂದು ಟಿಬೇಟನ್ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ತಶಿ ವುಂಗ್ಡು ತಿಳಿಸಿದ್ದಾರೆ. ಅವರು, ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಟಿಬೇಟಿಯನ್ ಸಂಸ್ಕೃತಿ ಮತ್ತು ಪರಂಪರೆಯ ವಾರದ ಆಚರಣೆಯು ವರ್ಣರಂಜಿತವಾಗಿರಲಿದೆ ಎಂದು ತಿಳಿಸಿದ್ದಾರೆ.
ಉತ್ಸವವು ಸಾಂಪ್ರದಾಯಿಕ ಸಂಗೀತ ಮತ್ತು ನೃತ್ಯ, ಮರಳು ಮಂಡಲದ ಲೈವ್ ರಚನೆ, ಕಾರ್ಪೆಟ್ ನೇಯ್ಗೆ ಮತ್ತು ಟಿಬೇಟಿಯನ್ ಚಿತ್ರಕಲೆ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ರುಚಿಕರವಾದ ಟಿಬೆಟಿಯನ್ ಪಾಕಪದ್ಧತಿ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಉತ್ಸವದಲ್ಲಿ ಪ್ರದರ್ಶಿಸಲಾಗುವುದು ಹಾಗೂ ಟಿಬೆಟ್ ವೈದ್ಯಕೀಯ ಶಿಬಿರ ಮತ್ತು ಸಾಂಪ್ರದಾಯಿಕ ಟಿಬೇಟಿಯನ್ ಕ್ರೀಡೆಗಳನ್ನು ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶವಿದೆ. ಮನರಂಜನೆಯ ಜೊತೆಗೆ, ಉತ್ಸವವು ಟಿಬೇಟಿಯನ್ ಬೌದ್ಧಧರ್ಮ, ಟಿಬೇಟಿಯನ್ ಮೆಡಿಸಿನ್, ವಿಶಿಷ್ಟ ಚಿತ್ರಕಲೆ ಮತ್ತು ಟಿಬೆಟ್ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಕುರಿತು ಸಂವಾದ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಸಾAಸ್ಕೃತಿಕ ಪರಂಪರೆಯ ಸಂರಕ್ಷಣೆಯನ್ನು ಉತ್ಸವ ಹೊಂದಿದೆ ಮತ್ತು ಖ್ಯಾತ ಟಿಬೇಟಿಯನ್, ನೇಪಾಳಿ ಮತ್ತಿತರ ಕಡೆಗಳಿಂದ ಆಗಮಿಸುವ ಕಲಾವಿದರು, ಸಂಗೀತಗಾರರು ಮತ್ತು ಕುಶಲಕರ್ಮಿಗಳಿಗೆ ತಮ್ಮ ಕಲೆಯನ್ನು ಪ್ರೇಕ್ಷಕರಿಗೆ ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮ ಆಯೋಜಕಿ ಲಿಪಿಕಾ ದೇವಯ್ಯ ಮಾತನಾಡಿ, ಗೋಲ್ಡನ್ ಟೆಂಪಲ್ ಸಮೀಪದ ಆವರಣದಲ್ಲಿ ನಡೆಯುವ ಉತ್ಸವದಲ್ಲಿ ಭಾರತ ಮತ್ತು ಟಿಬೇಟಿಯನ್ ಸಂಸ್ಕೃತಿಯ ಪರಂಪರೆ ಬಿಂಬಿಸುವ ಕಾರ್ಯಕ್ರಮಗಳು ನಡೆಯಲಿವೆ. ಟಿಬೇಟ್ ಉತ್ಸವದಲ್ಲಿ ಭಾರತೀಯರ, ಉತ್ಪನ್ನಗಳ ಪ್ರದರ್ಶನ ಕೂಡ ನಡೆಯಲಿದೆ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ೯೯೦೦೪೭೮೩೦೦, ೯೫೯೧೫೮೩೨೬೭ ಸಂಪರ್ಕಿಸಬಹುದು ಎಂದು ತಿಳಿಸಿದರು. ಈ ಸಂದರ್ಭ ಟಿಬೇಟಿಯನ್ ಚೇಂಬರ್ ಆಫ್ ಕಾಮರ್ಸ್ ಸದಸ್ಯರಾದ ಕುಂಚಾAಗ್, ಚೋಟಕ್ ಇದ್ದರು.