ಕೂಡಿಗೆ, ಫೆ. ೧೪: ನಂಜರಾಯ ಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯ ಹಕ್ಕು ಸಮಿತಿ ಸಭೆ ಮತ್ತು ಫಲಾನುಭವಿಗಳಿಗೆ ಆಡುಗಳ ವಿತರಣೆ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ೧೦ ಮಂದಿ ಫಲಾನುಭವಿಗಳಿಗೆ ತಲಾ ೪ ಆಡುಗಳನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಿತರಿಸಿದರು.

ನಂತರ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಮಡಿಕೇರಿ ಕ್ಷೇತ್ರದಲ್ಲಿ ೧೦೦೦ಕ್ಕೂ ಅಧಿಕ ಅರಣ್ಯ ಹಕ್ಕು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಗುರಿ ಹೊಂದಲಾಗಿದೆ. ಈ ಹಿಂದೆ ಕೂಡ ಅರ್ಜಿ ಸಮಿತಿಯ ಮೂಲಕ ಹಾರಂಗಿ ಪುನರ್ವಸತಿ ಯೋಜನೆಯಡಿ ಫಲಾನುಭವಿಗಳಿಗೆ ದಾಖಲೆಗಳನ್ನು ಒದಗಿಸಲಾಗಿತ್ತು. ಜಾತಿ, ಧರ್ಮ, ಪಕ್ಷ ಮೀರಿ ಫಲಾನುಭವಿಗಳಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಮುಂದೆಯೂ ಕೂಡ ಈ ಕಾರ್ಯ ನಿರಂತರವಾಗಿ ಮುಂದುವರೆಯಲಿದೆ ಎಂದರು.

ಗ್ರಾ.ಪA. ಅಧ್ಯಕ್ಷ ಸಿ.ಎಲ್. ವಿಶ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಭಾಗದ ಗ್ರಾಮದ ಜನರು ಹಣಕ್ಕಿಂತ ಮಿಗಿಲಾಗಿ ಅಭಿವೃದ್ಧಿ ಪರವಾಗಿದ್ದಾರೆ. ಶಾಸಕರ ನೇತೃತ್ವದಲ್ಲಿ ಹಲವು ಅಭಿವೃದ್ಧಿ ಯೋಜನೆಗಳು ಇಲ್ಲಿ ಸಾಕಾರಗೊಂಡಿವೆ. ಆದರೆ ಸಂಸದರ ಕಡೆಯಿಂದಲೂ ಅಗತ್ಯ ಯೋಜನೆ ಗಳು, ಸೌಲಭ್ಯಗಳು ದೊರೆಯು ವಂತಾಗಬೇಕು ಎಂದು ಬೇಡಿಕೆಯಿತ್ತರು. ಗ್ರಾ.ಪಂ. ಸದಸ್ಯ, ಅರಣ್ಯ ಹಕ್ಕು ಸಮಿತಿ ಮಾರ್ಗದರ್ಶಕ ಆರ್.ಕೆ. ಚಂದ್ರ ಮಾತನಾಡಿ, ಅರಣ್ಯ ಹಕ್ಕು ಸಮಿತಿ ಮೂಲಕ ಅಗತ್ಯ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ. ಶಾಸಕರ ಕಾಳಜಿಯಿಂದ ಈ ಕಾರ್ಯ ಅತಿ ಶೀಘ್ರವಾಗಿ ಪೂರ್ಣಗೊಂಡು ಸದ್ಯದಲ್ಲಿಯೇ ಫಲಾನುಭವಿಗಳಿಗೆ ಹಕ್ಕು ಪತ್ರ ಲಭಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಸಮೀರ, ಪಿಡಿಓ ಕಲ್ಪ, ವಲಯ ಅರಣ್ಯ ಅಧಿಕಾರಿ ಶಿವರಾಂ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಬಾಲಕೃಷ್ಣ, ಚಂದ್ರಪ್ಪ, ಪಶುಪಾಲನಾ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಡಾ. ಬಾದಾಮಿ, ತಾ.ಪಂ. ಮಾಜಿ ಸದಸ್ಯ ವಿಜು ಚಂಗಪ್ಪ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪ್ರೇಮಾನಂದ, ಮಾಜಿ ಸದಸ್ಯರಾದ ಟಿ.ಕೆ. ಸುಮೇಶ್, ಚಿತ್ರಾ, ವಿಜು, ಡಿ.ಆರ್.ಎಫ್.ಓ. ಸುಬ್ರಾಯ, ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ರಾಮು, ಸಹಕಾರ ಸಂಘದ ಅಧ್ಯಕ್ಷ ಮುರಳಿ ಮಾದಯ್ಯ, ಗ್ರಾಮದ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರು, ಫಲಾನುಭವಿಗಳು ಇದ್ದರು.