*ಗೋಣಿಕೊಪ್ಪ, ಫೆ. ೧೪: ಕೊಡಗಿಗೆ ವಿಶೇಷ ಅನುದಾನವನ್ನು ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ವಿಧಾನ ಸಭಾ ಕಲಾಪ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ ಶಾಸಕರು ಕೊಡಗು ಜಿಲ್ಲೆಯಲ್ಲಿ ಪ್ರತಿವರ್ಷ ಭಾರೀ ಮಳೆಗೆ ರಸ್ತೆಗಳು ಹಾಳಾಗುತ್ತಿರುತ್ತವೆ. ರಸ್ತೆಗಳ ಅಭಿವೃದ್ಧಿಗೆ ಈ ಹಿಂದೆ ೨೦೦೮-೨೦೧೩ರ ವರೆಗೆ ನಮ್ಮ ಸರ್ಕಾರ ಇದ್ದಾಗ ಪ್ರತಿ ಮುಂಗಡ ಪತ್ರದಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತಿದ್ದು, ಅದರಂತೆ ಈ ವರ್ಷದ ಮುಂಗಡ ಪತ್ರದಲ್ಲಿ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ೧೫೦ ಕೋಟಿ ರೂ. ಗಳ ಅನುದಾನ ಘೋಷಣೆ ಮಾಡುವಂತೆ ಡಾ. ಡಿ.ಎಂ. ನಂಜುAಡಪ್ಪ ಸಮಿತಿ ವರದಿಯಲ್ಲಿ ಪ್ರಸ್ತಾಪವಾಗಿರುವಂತೆ ಹಾಗೂ ಇತ್ತೀಚಿಗೆ ಚಿಕ್ಕಮಗಳೂರು ಜಿಲ್ಲಾ ಉತ್ಸವದ ಸಂದರ್ಭದಲ್ಲಿ ಕೊಡಗು ಮತ್ತು ಚಿಕ್ಕಮಗಳೂರನ್ನು ‘ಸ್ವಿಜರ್ಲ್ಯಾಂಡ್’ ಮಾದರಿಯಲ್ಲಿ ಪ್ರವಾಸಿ ಕೇಂದ್ರವನ್ನಾಗಿ ಮಾಡಲು ಘೋಷಿಸಿದಂತೆ, ಜಿಲ್ಲೆಯ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲು ರೂ.೧೦೦ ಕೋಟಿ ಅನುದಾನವನ್ನು ನೀಡುವಂತೆ, ಕೊಡಗು ಸಂಸ್ಕೃತಿಯ ಮೂಲ ಆಚಾರ ವಿಚಾರಗಳನ್ನು ಹೊಂದಿರುವ ಕುಟುಂಬದ ‘ಐನ್ ಮನೆ’ ಎಂಬ ಹೆಸರಿನಲ್ಲಿದ್ದು, ಇದರ ಅಭಿವೃದ್ಧಿಗಾಗಿ ರೂ. ೧೦ ಕೋಟಿ ಅನುದಾನವನ್ನು ಪೋಷಣೆ ಮಾಡುವಂತೆ, ಪೊನ್ನಂಪೇಟೆ ಮತ್ತು ಕುಶಾಲನಗರವನ್ನು ನೂತನ ತಾಲೂಕುಗಳಾಗಿ ಘೋಷಣೆ ಮಾಡಲಾಗಿದ್ದು, ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಈ ಸ್ಥಳಗಳಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ತಲಾ ೧೦ ಕೋಟಿ ರೂ. ಗಳನ್ನು ಘೋಷಣೆ ಮಾಡುವಂತೆ ಮತ್ತು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಗೆ ನೀಡಲಾಗುವ ಇತರ ಅನುದಾನಗಳ ಜೊತೆಯಲ್ಲಿ, ಮೇಲ್ಕಂಡ ಅಂಶಗಳಿಗೆ ವಿಶೇಷ ಅನುದಾನವನ್ನು ಮುಂಬರುವ ೨೦೨೩-೨೪ನೇ ಸಾಲಿನ ಆಯವ್ಯಯದಲ್ಲಿ ಅಳವಡಿಸಿ ಘೋಷಿಸುವಂತೆ ಮನವಿ ಪತ್ರವನ್ನು ನೀಡಲಾಗಿದೆ.