ಸಿದ್ದಾಪುರ, ಫೆ. ೧೨ : ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಕನ್ನಡ ಮಾಧ್ಯಮದ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಶಿಕ್ಷಣ ಇಲಾಖೆಯ ಈ.ಸಿ.ಓ ಹರೀಶ್ ಭಾಗವಹಿಸಿ ಮಾತನಾಡಿ ಶಾಲೆಗಳಲ್ಲಿ ನಡೆಯುವ ವಸ್ತು ಪ್ರದರ್ಶನಗಳು ಮಕ್ಕಳ ಬುದ್ದಿಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆ ಹೆಚ್ಚುತ್ತಿದ್ದು, ಮಕ್ಕಳು ಹಾಗೂ ಪೋಷಕರು ಇಂತಹ ವಸ್ತು ಪ್ರದರ್ಶನಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಸಹಕಾರಿಯಾಗುತ್ತದೆ ಎಂದರು.

ಸಿ.ಆರ್.ಪಿ ಅಶೋಕ್ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದು ಮುಖ್ಯ. ರಚನಾತ್ಮಕ ಹಾಗೂ ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೆ ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಅಗತ್ಯ. ಈ ಕಾರಣದಿಂದ ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳಿಗೆ ಸಹಕಾರಿಯಾಗಲಿದೆ ಎಂದರು.

ವಿವಿಧ ಬಗೆಯ ಮಾಡೆಲ್‌ಗಳು ಗಮನ ಸೆಳೆದವು. ಹೊಸ ತಂತ್ರಜ್ಞಾನ, ಆಸ್ಪತ್ರೆ, ಗಡಿಯಾರ, ಧಾರ್ಮಿಕ ಮಂದಿರಗಳು, ಮೊಬೈಲ್ ತಂತ್ರಜ್ಞಾನ, ಸೌರವ್ಯೂಹ, ಸೌರಶಕ್ತಿ, ನೀರಾವರಿ, ನೀರಿನ ಮೂಲಗಳು, ಪೌಷ್ಠಿಕ ಆಹಾರ, ಜೀರ್ಣಾಂಗ ವ್ಯವಸ್ಥೆ, ಗ್ರಾಫೈಟ್, ಜ್ವಾಲಾಮುಖಿ ಮುಂತಾದ ವಿಷಯಗಳ ಕುರಿತು ವಿವಿಧ ಮಾದರಿಯ ಚಾರ್ಟ್ಗಳನ್ನು ಪ್ರದರ್ಶಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ವ್ಯವಸ್ಥಾಪಕರಾದ ಪ್ರಣೀತ, ಲಿಂಡ, ಮುಖ್ಯ ಶಿಕ್ಷಕಿ ಪ್ಲೋರಾ, ಶಾಲೆಯ ಸಹ ಶಿಕ್ಷಕರು ಹಾಗೂ ಪೋಷಕರು, ನೆರೆಯ ಶಾಲೆಯ ಎಲ್ಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.