ಮಡಿಕೇರಿ, ಫೆ. ೧೨: ಯಾವುದೇ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಮಹಿಳೆಯರು ತೊಡಗಿಸಿಕೊಳ್ಳಬೇಕೆಂಬ ಸಂದರ್ಭ ಅವರನ್ನು ಪ್ರೋತ್ಸಾಹಿಸಬೇಕೇ ವಿನಾ ನಿರಾಶೆಗೊಳಿಸಬಾರದು ಎಂದು ಇನ್ನರ್ ವೀಲ್ ಜಿಲ್ಲೆ ೩೧೮ ರ ಅಧ್ಯಕ್ಷೆ ಕವಿತಾ ನಿಯಾತ್ ಹೇಳಿದ್ದಾರೆ.

ಮಡಿಕೇರಿ ಇನ್ನರ್ ವೀಲ್ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕವಿತಾ ನಿಯಾತ್, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಮಹಿಳೆಯರು ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಉದ್ದೇಶಿತ ಗುರಿ ಸಾಧಿಸಲು ಮಹಿಳೆಯರು ಹೆಚ್ಚು ಕಟಿಬದ್ದರಾಗಿರುತ್ತಾರೆ. ಇಂತಹ ಸಂದರ್ಭ ಮಹಿಳೆಯರನ್ನು ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು.

ಯಾವುದೇ ದೊಡ್ಡ ಯೋಜನೆ ಕೈಗೊಳ್ಳುವ ಸಂದರ್ಭ ಸಣ್ಣ ಪುಟ್ಟ ಲೋಪದೋಷಗಳು ಸಹಜ. ಲೋಪಗಳನ್ನೇ ದೊಡ್ಡದು ಮಾಡುವ ಬದಲಿಗೆ ಅವುಗಳನ್ನು ನಿರ್ಲಕ್ಷಿಸಿ ಉದ್ದೇಶಿತ ಗುರಿ ಸಾಧನೆಗೆ ಮುಂದಾಗುವುದು ಉತ್ತಮ ಎಂದು ಅವರು ಹೇಳಿದರು.

ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಡಾ. ರೇಣುಕಾ ಸುಧಾಕರ್ ಮಾತನಾಡಿ, ಈ ವರ್ಷ ಸದಸ್ಯರ ಸಹಕಾರದಿಂದ ಇನ್ನರ್ ವೀಲ್ ಸಂಸ್ಥೆಯು ೫೦ಕ್ಕೂ ಅಧಿಕ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಿದೆ. ಸಮಾಜ ಸೇವಾ ಕಾರ್ಯಗಳಿಗೆ ಮಡಿಕೇರಿ ಇನ್ನರ್ ವೀಲ್ ಬದ್ದವಾಗಿದೆ ಎಂದರು.

ಇನ್ನರ್ ವೀಲ್ ಸಂಸ್ಥೆಯ ವಾರ್ತಾ ಸಂಚಿಕೆಯನ್ನು ಮಡಿಕೇರಿ ರೋಟರಿ ಅಧ್ಯಕ್ಷ ಕಾಂಡAಡ ಕಾರ್ಯಪ್ಪ ಬಿಡುಗಡೆಗೊಳಿಸಿದರು.

ಮಡಿಕೇರಿ ಇನ್ನರ್ ವೀಲ್ ಸಂಸ್ಥೆಗೆ ದಿವ್ಯಾ ಅರೋರ, ಕಾಂಡAಡ ಪೂಜಾ ಕಾರ್ಯಪ್ಪ, ತೆಕ್ಕಡೆ ಗುಲಾಬಿ ಜನಾರ್ಧನ್, ಶಾಂತೆಯAಡ ನಮೃತ ವಿಕಾಸ್ ಮೃಣಾಲಿನಿ ಚಿಣ್ಣಪ್ಪ ಅವರುಗಳನ್ನು ನೂತನ ಸದಸ್ಯರನ್ನಾಗಿ ಸೇರ್ಪಡೆಗೊಳಿಸಲಾಯಿತು.

ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ಕಾರ್ಯದರ್ಶಿ ಲಲಿತಾ ರಾಘವನ್ ಸಂಸ್ಥೆಯ ವಾರ್ಷಿಕ ವರದಿ ಮಂಡಿಸಿದರು. ಸದಸ್ಯೆ ಸಪ್ನ ಮಂದಣ್ಣ ಪ್ರಾರ್ಥಿಸಿ, ನಮಿತಾ ರೈ ವಂದಿಸಿದರು. ಇನ್ನರ್ ವೀಲ್ ಸಂಸ್ಥೆಯ ಮುಂದಿನ ಸಾಲಿನ ಜಿಲ್ಲಾ ಅಧ್ಯಕ್ಷೆ ಪೂರ್ಣಿಮಾ ರವಿ ವೇದಿಕೆಯಲ್ಲಿದ್ದರು.

ರೋಟರಿ ಜಿಲ್ಲೆ ೩೧೮೧ರ ಮಾಜಿ ಗವರ್ನರ್ ಡಾ. ರವಿ ಅಪ್ಪಾಜಿ, ವಲಯ ೬ರ ಸಹಾಯಕ ಗವರ್ನರ್ ರತನ್ ತಮ್ಮಯ್ಯ, ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ., ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ರೋಟರಿ ವುಡ್ಸ್ ಅಧ್ಯಕ್ಷ ಎಸ್.ಎಸ್. ಸಂಪತ್ ಕುಮಾರ್, ರೋಟರಿ ಪ್ರಮುಖರಾದ ಡಾ. ಎಂ.ಜಿ. ಪಾಟ್ಕರ್, ಅನಂತಸುಬ್ಬರಾವ್, ಗೀತಾ ಗಿರೀಶ್ ಸೇರಿದಂತೆ ಇನ್ನರ್ ವೀಲ್ ಸದಸ್ಯೆಯರು ಹಾಜರಿದ್ದರು.

ಇನ್ನರ್ ವೀಲ್ ಸದಸ್ಯೆಯರಾದ ಶಫಾಲಿ ರೈ, ಸಲಿಲ ಪಾಟ್ಕರ್, ದೇಚು ಶ್ಯಾಂ, ಕಣ್ಣು ದೇವರಾಜ್, ಬೊಳ್ಳು ಮೇದಪ್ಪ, ಜ್ಯೂಬಿ ಗಣಪತಿ, ಶ್ವೇತಾ ಪೂಣಚ್ಚ, ಲತಾ ಚಂಗಪ್ಪ, ದಿವ್ಯ ಮಂದಪ್ಪ, ರಶ್ಮಿ ಪ್ರವೀಣ್, ಸುಮಾ ತಿಮ್ಮಯ್ಯ ಕಾರ್ಯಕ್ರಮ ನಿರ್ವಹಿಸಿದರು.