ಕೂಡಿಗೆ, ಫೆ. ೧೨: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿರುವ ಮಾವುತೋಪು ಸಮೀಪದ ಏತ ನೀರಾವರಿ ಘಟಕದ ಬಳಿ ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ನಡೆದಿದೆ. ಕೂಡ್ಲೂರು ನಿವಾಸಿ ಕೂಲಿ ಕಾರ್ಮಿಕ ನಾಗರಾಜ್ ಎಂಬವರ ಪುತ್ರ ಪೃಥ್ವಿ (೭) ಹಾಗೂ ನಾಗರಾಜ್ ಅವರ ಸಹೋದರ ಆಟೋ ಚಾಲಕ ಸತೀಶ್ ಎಂಬವರ ಪುತ್ರ ಪ್ರಜ್ವಲ್ (೪) ಮೃತಪಟ್ಟ ಬಾಲಕರಾಗಿದ್ದಾರೆ. ಕಾವೇರಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಸಂದರ್ಭ ಆಕಸ್ಮಿಕವಾಗಿ ಮುಳುಗಿ ಇಬ್ಬರೂ ಕೊನೆಯುಸಿರೆಳೆದಿದ್ದಾರೆ. ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.