ಸುಂಟಿಕೊಪ್ಪ, ಫೆ. ೧೨: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ - ಪತ್ನಿ ಕೆರೆಗೆ ಹಾರಿದ ಘಟನೆ ನಡೆದಿದೆ. ವಿಜಯ ಹಾಗೂ ಸೌಮ್ಯ ಎಂಬವರುಗಳೇ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದು, ಸೌಮ್ಯಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ವಿಜಯನ ಮೃತದೇಹ ಪತ್ತೆ ಆಗಿಲ್ಲ.

ಕೆದಕಲ್ ಗ್ರಾಮ ಪಂಚಾಯಿತಿಗೆ ಸೇರಿದ ಹೊರೂರು ಗ್ರಾಮದ ಮುಕ್ಕಾಟಿ ಸಂಜು ಪೊನ್ನಪ್ಪ ಎಂಬವರ ತೋಟದ ಲೈನ್‌ಮನೆಯಲ್ಲಿ ವಾಸವಿದ್ದ ವಿಜಯ (೩೨) ಹಾಗೂ ಸೌಮ್ಯ (೨೯) ದಂಪತಿಯ ನಡುವೆ ಇಂದು ಮಧ್ಯಾಹ್ನ ಕಲಹವೇರ್ಪಟ್ಟಿದೆ.

ಈ ಹಿನ್ನೆಲೆಯಲ್ಲಿ ವಿಜಯ ತೋಟದಲ್ಲಿದ್ದ ಕೆರೆಗೆ ಹಾರಿದ್ದು, ಇದನ್ನರಿತ ಸೌಮ್ಯ ಕೂಡ ಕೆರೆಗೆ ಹಾರಿದ್ದಾಳೆ. ಈ ಸಂದರ್ಭ ಸ್ಥಳೀಯರು ಸೌಮ್ಯಳನ್ನು ರಕ್ಷಣೆ ಮಾಡಿದ್ದಾರೆ.

ಆದರೆ, ವಿಜಯನ ಮೃತದೇಹ ಪತ್ತೆಯಾಗಿಲ್ಲ. ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀಧರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಾತ್ರಿವರೆಗೂ ಕಾರ್ಯಾಚರಣೆ ನಡೆಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಮೃತ ವಿಜಯ ದಂಪತಿಗೆ ೫ ತಿಂಗಳ ಮಗುವಿದ್ದು, ಮೃತದೇಹವನ್ನು ಹುಡುಕುವ ಕಾರ್ಯವನ್ನು ತಾ. ೧೩ರಂದು (ಇಂದು) ಮುಂದುವರೆ ಸುವುದಾಗಿ ಠಾಣಾಧಿಕಾರಿ ಶ್ರೀಧರ್ ತಿಳಿಸಿದ್ದಾರೆ.

-ರಾಜು ರೈ