ವಿಶೇಷ ವರದಿ: ಈಶಾನ್ವಿ
ವೀರಾಜಪೇಟೆ, ಫೆ. ೧೨: ಹಲವಾರು ವರ್ಷದಿಂದ ಆರಂಭಗೊಳ್ಳದಿರುವ ಸಮಾಜ ಕಲ್ಯಾಣ ಇಲಾಖೆಯ ಅಂಬೇಡ್ಕರ್ ಭವನ ಕಟ್ಟಡ ಸದ್ಯದಲ್ಲೇ ಉದ್ಘಾಟನೆಗೊಳ್ಳಲಿದೆ. ವೀರಾಜಪೇಟೆ ತಾಲೂಕಿನಲ್ಲಿ ಅಂಬೇಡ್ಕರ್ ಭವನ ಇಲ್ಲದ ಕಾರಣ ಆರು ವರ್ಷಗಳ ಹಿಂದೆ ಅಂಬೇಡ್ಕರ್ ಭವನದ ಕಾಮಗಾರಿಗೆ ೨೦೧೬ ರ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದ್ದರೂ ಇದುವರೆಗೆ ಅನುದಾನದ ಕೊರತೆ ಹಾಗೂ ಇನ್ನಿತರ ಕಾರಣಗಳಿಂದ ಕಾಮಗಾರಿ ಪೂರ್ಣಗೊಳ್ಳದೆ ಉದ್ಘಾಟನೆ ಭಾಗ್ಯ ಕಾಣದಾಗಿತ್ತು.
ಇದೀಗ ಕಾಮಗಾರಿ ಪೂರ್ಣಗೊಂಡಿದ್ದು ೧೮೦ ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡಿರುವ ಎರಡು ಅಂತಸ್ಥಿನ ಡಾ. ಬಿ.ಆರ್. ಅಂಬೇಡ್ಕರ್ ಭವನ ಸದ್ಯದಲ್ಲೆ ಉದ್ಘಾಟನೆಗೊಳ್ಳುವ ಸಿದ್ಧತೆಗಳು ನಡೆಯುತ್ತಿದೆ. ವೀರಾಜಪೇಟೆ ತಾಲೂಕಿನಲ್ಲಿ ಅಂಬೇಡ್ಕರ್ ಭವನದ ಅಗತ್ಯವಿದ್ದು ತಾಲೂಕು ವ್ಯಾಪ್ತಿಯಲ್ಲಿ ಭವನ ನಿರ್ಮಾಣವಾಗಬೇಕು ಎಂದು ಈ ಹಿಂದೆ ಪ್ರಯತ್ನಿಸಿದ ನಿವೃತ್ತ ಶಿಕ್ಷಕ ಎನ್. ವೀರಭದ್ರಯ್ಯ ಮತ್ತು ಮಾಜಿ ಸೈನಿಕ ಹೆಚ್.ಕೆ. ಗಣೇಶ್ ಅವರು ಸಮಿತಿಯನ್ನು ರಚಿಸಿ ಅಂಬೇಡ್ಕರ್ ಭವನ ಅಗಲೇ ಬೇಕೆಂಬ ಪಣ ತೊಟ್ಟು ಸ್ಥಳೀಯ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ವಿವರಿಸಿದಾಗ ಶಾಸಕರು ಸ್ಪಂದಿಸಿದ್ದರು.
ಈ ಸಂದರ್ಭ ಅಂಬೇಡ್ಕರ್ ಯೋಜನೆ ಅಭಿವೃದ್ಧಿ ಸಂಘವನ್ನು ರಚನೆ ಮಾಡಿ ೨೦೧೬ರಲ್ಲಿ ಸಮಾಜ ಕಲ್ಯಾಣ ಇಲಾಖೆ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದಾಗ ಶಾಸಕರ ಮುಂದಾಳತ್ವದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ೧೮೦ ಲಕ್ಷ ರೂ, ಅನುದಾನ ಬಿಡುಗಡೆಯಾಗಿತ್ತು. ನಂತರ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು
(ಮೊದಲ ಪುಟದಿಂದ) ಭೂಮಿಪೂಜೆ ನೆರವೇರಿಸಿದ್ದರು.
ಕಟ್ಟಡ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದವರು ಪ್ರಾರಂಭಿಸಿದರು. ಕಾಮಗಾರಿ ನಡೆಯುವ ಸಂದರ್ಭ ೧೫೦ ಲಕ್ಷ ರೂ. ಅನುದಾನ ಬಂದ ನಂತರ ಉಳಿದ ಹೆಚ್ಚುವರಿ ಅನುದಾನ ಇಲ್ಲ ಎಂಬ ಮಾತು ಕೇಳಿ ಬಂತು. ಈ ಸಂದರ್ಭ ವೀರಾಜಪೇಟೆ ಪುರಸಭೆಯಿಂದ ರೂ. ೨೦ ಲಕ್ಷ ಹಾಗೂ ತಾಲೂಕಿನ ೩೬ ಗ್ರಾಮ ಪಂಚಾಯಿತಿಗಳಿAದ ಒಟ್ಟು ೧೧ ಲಕ್ಷ ರೂ.ವನ್ನು ಸಂಘದ ಸದಸ್ಯರ ಸಹಕಾರದಿಂದ ಪಡೆಯಲಾಗಿದೆ ಎಂದು ಅಂಬೇಡ್ಕರ್ ಭವನ ಅಭಿವೃದ್ಧಿ ಸಂಘದ ಅಧ್ಯಕ್ಷರು ಮಾಹಿತಿ ನೀಡಿದರು.
ಅಂಬೇಡ್ಕರ್ ಭವನದ ಕಟ್ಟಡದಲ್ಲಿ, ವಾಹನ ನಿಲುಗಡೆ ಸ್ಥಳದಲ್ಲಿ ಕಾಂಕ್ರೀಟ್ ಕಾಮಗಾರಿ ಬಾಕಿ ಉಳಿದಿದೆ. ಊಟದ ಸಭಾಂಗಣ, ಸಭಾ ಮಂಟಪ, ಶೌಚಾಲಯಗಳ ಕಾಮಗಾರಿ ಮುಗಿದಿದ್ದು, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಉದ್ಘಾಟನೆ ಸಮಾರಂಭ ನಡೆಯಲಿದೆ, ರಾಜ್ಯದ ಮುಖ್ಯಮಂತ್ರಿ ಸದ್ಯದಲ್ಲಿ ಜಿಲ್ಲೆಗೆ ಬರಲಿದ್ದು, ಈ ಸಂದರ್ಭ ಉದ್ಘಾಟಿಸಲಿದ್ದಾರೆ ಎಂದು ಹೇಳಲಾಗಿದೆ.