ಕಹ್ರಾಮನ್ಮರಸ್, ಫೆ. ೧೨: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಭಾನುವಾರ ೨೮ ಸಾವಿರಕ್ಕೆ ಏರಿಕೆಯಾಗಿದ್ದು, ಈ ಸಂಖ್ಯೆ ದ್ವಿಗುಣವಾಗಬಹುದು ಅಥವಾ ಅದಕ್ಕಿಂತ ಹೆಚ್ಚು ಆಗಬಹುದು ಎಂದು ವಿಶ್ವಸಂಸ್ಥೆಯ ಮಾನವೀಯ ನೆರವು ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಅವರು ಹೇಳಿದ್ದಾರೆ.

ಪರಿಸ್ಥಿತಿ ಪರಿಶೀಲಿಸಲು ಶನಿವಾರ ಟರ್ಕಿಯ ದಕ್ಷಿಣ ನಗರವಾದ ಕಹ್ರಾಮನ್‌ಮರಸ್‌ಗೆ ಆಗಮಿಸಿರುವ ಗ್ರಿಫಿತ್ಸ್ ಅವರು, ಸಾವಿನ ಸಂಖ್ಯೆ ೫೦ ಸಾವಿರ ಗಡಿ ದಾಟುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ನಾವು ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ನಿಖರವಾಗಿ ಅಂದಾಜು ಮಾಡುವುದು ಕಷ್ಟ ಎಂದು ನಾನು ಭಾವಿಸುತ್ತೇನೆ. ಆದರೆ ಖಂಡಿತವಾಗಿಯೂ ಸಾವಿನ ಸಂಖ್ಯೆ ದ್ವಿಗುಣ ಅಥವಾ ಅದಕ್ಕಿಂತ ಹೆಚ್ಚಾಗಲಿದೆ ಎಂದು ಗ್ರಿಫಿತ್ಸ್ ಅವರು ತಿಳಿಸಿದ್ದಾರೆ.

ಶೀಘ್ರದಲ್ಲೇ ರಕ್ಷಣಾ ಸಿಬ್ಬಂದಿಗಳು ಮಾನವೀಯ ನೆರವು ಏಜೆನ್ಸಿಗಳಿಗೆ ದಾರಿ ಮಾಡಿಕೊಡುತ್ತಾರೆ. ಮುಂದಿನ ತಿಂಗಳುಗಳಲ್ಲಿ ಭೂಕಂಪ ಪೀಡಿತರನ್ನು ನೋಡಿಕೊಳ್ಳುವುದು ಅವರ ಕೆಲಸವಾಗಲಿದೆ ಎಂದು ಅವರು ಹೇಳಿದ್ದಾರೆ. ಭೂಕಂಪದಿAದಾಗಿ ಟರ್ಕಿ ಮತ್ತು ಸಿರಿಯಾ ಸೇರಿದಂತೆ ೨.೬ ಕೋಟಿ ಜನರು ತೊಂದರೆಗೀಡಾಗಿದ್ದು, ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಿ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಟರ್ಕಿಯಲ್ಲಿ ಇದುವರೆಗೆ ೨೪,೬೧೭ ಮತ್ತು ಸಿರಿಯಾದಲ್ಲಿ ೩,೫೭೪ ಜನರು ಸಾವನ್ನಪ್ಪಿದ್ದಾರೆ. ಎರಡೂ ದೇಶಗಳಲ್ಲಿ ಒಟ್ಟು ೨೮,೧೯೧ ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮತ್ತು ವೈದ್ಯರು ತಿಳಿಸಿದ್ದಾರೆ.