ಚೆಟ್ಟಳ್ಳಿ, ಫೆ. ೧೨: ಚೆಟ್ಟಳ್ಳಿ-ಮಡಿಕೇರಿಯ ಸಂಪರ್ಕಿಸುವ ನಡುವಿನ ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹಿಸಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಹಾಗೂ ಸ್ಥಳೀಯರು ಸಭೆ ಸೇರಿ ಚರ್ಚಿಸಿದರು.

ಕಳೆದ ಮೂರು ದಿನಗಳ ಹಿಂದೆ ಆ್ಯಂಬ್ಯುಲೆನ್ಸ್ ಹಾಗೂ ಬೈಕ್ ನಡುವೆ ಅಪಾಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಬಲಿಯಾಗಿದ್ದಾನೆ. ಅಪಘಾತಕ್ಕೆ ರಸ್ತೆ ಬದಿಯಲ್ಲಿ ತೆಗೆದು ಮುಚ್ಚದ ಕೇಬಲ್ ಗುಂಡಿಯೇ ಕಾರಣವಾಗಿದೆಂದು ಇದಕ್ಕೆ ಕೇಬಲ್ ಅಳವಡಿಸಿರುವ ಗುತ್ತಿಗೆದಾರನೇ ಕಾರಣವೆಂದು ಸ್ಥಳಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕ ಸಭೆ ಕರೆಯಲಾಯಿತು. ಮ್ರತ್ಯುಕೂಪವಾದ ರಸ್ತೆಯ ದುರಸ್ತಿ ಕಾರ್ಯ ಅತೀ ಶೀಘ್ರದಲ್ಲಿ ಆಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆಯೊಡ್ದಿ ಪ್ರತಿಭಟಿಸಲಾಗುವುದೆಂದು ಸ್ಥಳೀಯರು ಎಚ್ಚರಿಸಿದರು.

ನಿವೃತ್ತ ಇಂಜಿನಿಯರ್ ಬಿದ್ದಂಡ ಮಾದಯ್ಯ ಮಾತನಾಡಿ, ಮುಖ್ಯ ರಸ್ತೆ ಹಾಗೂ ಉಬ್ಬುಗಳ ನಿರ್ಮಾಣಕ್ಕೆ ಹಲವು ನಿಯಮವಿದ್ದರೂ ಇಲಾಖೆಯೇ ನಿಯಮ ಪಾಲಿಸಿಲ್ಲದ ಪರಿಣಾಮ ಅಪಾಯ ಸಂಭವಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಲೋಕೇಶ್ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದರು. ಸ್ಥಳೀಯರಾದ ಮುಳ್ಳಂಡ ರತ್ತು ಚಂಗಪ್ಪ , ಕಡೇಮಾಡ ವಿನ್ಸಿ ಅಪ್ಪಯ್ಯ ಸಮಸ್ಯೆಗಳ ಬಗ್ಗೆ ತಿಳಿಸಿದರು.

ಸಭೆಯಲ್ಲಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಟಿ. ಮುತ್ತಪ್ಪ, ಸೋಮೆಯಂಡ ದಿಲೀಪ್ ಅಪ್ಪಚ್ಚು, ಪೇರಿಯನ ಜಯಾನಂದ, ಬಟ್ಟೀರ ರಘು ಬೋಪಯ್ಯ, ಜುಬೇರ್ ಇದ್ದರು.

ನಾಳೆಯಿಂದಲೇ ರಸ್ತೆ ದುರಸ್ತಿ ಕಾರ್ಯವನ್ನು ನಡೆಸುತ್ತೇವೆ ಹಾಗೂ ಒಂದೂವರೆ ಕಿಮೀವರೆಗೆ ಕಾಂಕ್ರೀಟ್ ರಸ್ತೆ ಮಾಡಲು ಆದೇಶವಿದ್ದು ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳಲಾ ಗುವುದೆಂದು ಜೂನಿಯರ್ ಇಂಜಿನಿ ಯರ್ ಪೀಟರ್ ಭರವಸೆ ನೀಡಿದರು.