ಏರ್ ಶೋ ೨೦೨೩: ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ

ಬೆಂಗಳೂರು, ಫೆ. ೧೨: ೨೦೨೩ರ ಬೆಂಗಳೂರು ಏರ್ ಶೋ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂಜೆ ಬೆಂಗಳೂರಿಗೆ ಆಗಮಿಸಿದ್ದಾರೆ. ಭಾನುವಾರ ಸಂಜೆ ತಮ್ಮ ವಿಶೇಷ ವಿಮಾನದಲ್ಲಿ ಹೆಚ್.ಎ.ಎಲ್. ವಿಮಾನ ನಿಲ್ದಾಣಕ್ಕೆ ಆಗಮಿಸಿದ ನರೇಂದ್ರ ಮೋದಿ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್‌ಲೋಟ್, ಸಿಎಂ ಬಸವರಾಜ ಬೊಮ್ಮಾಯಿ ಸ್ವಾಗತಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು, ರಾಜಭವನದಲ್ಲೇ ವಾಸ್ತವ್ಯ ಹೂಡಿದ್ದು, ತಾ. ೧೩ ರಂದು ಬೆಳಿಗ್ಗೆ ರಾಜಭವನದಿಂದ ಪ್ರಧಾನಿ ನರೇಂದ್ರ ಮೋದಿ ಹೊರಡಲಿದ್ದಾರೆ. ಮೇಖ್ರಿ ಸರ್ಕಲ್ ಬಳಿಕ ಹೆಚ್‌ಕ್ಯೂಟಿಸಿ ಹೆಲಿಪ್ಯಾಡ್‌ಗೆ ಮೋದಿ ತೆರಳಲಿದ್ದು, ಅಲ್ಲಿಂದ ಎಂಐ-೧೭ ಹೆಲಿಕಾಪ್ಟರ್ ಮೂಲಕ ಯಲಹಂಕ ಏರ್‌ಪೋರ್ಸ್ ತಲುಪಲಿದ್ದಾರೆ. ಬೆಳಿಗ್ಗೆ ೯.೩೦ಕ್ಕೆ ಯಲಹಂಕ ವಾಯುನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಏರ್ ಶೋಗೆ ಚಾಲನೆ ನೀಡಲಿದ್ದು, ೯.೩೦ರಿಂದ ೧೧.೩೦ ರವರೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಇದಾದ ಬಳಿಕ ಮೋದಿ, ಏರೋ ಇಂಡಿಯಾದ ವೈಮಾನಿಕ ಪ್ರದರ್ಶನ ವೀಕ್ಷಿಸಲಿದ್ದಾರೆ. ೧೧.೩೦ಕ್ಕೆ ಏರ್ ಶೋ ಸ್ಥಳದಿಂದ ಹೊರಟು, ಯಲಹಂಕ ಏರ್‌ಫೋರ್ಸ್ಗೆ ಆಗಮಿಸಲಿರುವ ನರೇಂದ್ರ ಮೋದಿ ಅಲ್ಲಿಂದ ನೇರವಾಗಿ ಐಎಎಫ್ ಬಿಬಿಜೆ ವಿಮಾನದಲ್ಲಿ ತ್ರಿಪುರಾಗೆ ತೆರಳಲಿದ್ದಾರೆ.

ಆಂಧ್ರ ರಾಜ್ಯಪಾಲರಾಗಿ ಅಬ್ದುಲ್ ನಜೀರ್

ಬೆಂಗಳೂರು, ಫೆ. ೧೨: ಸುಪ್ರೀಂ ಕೋರ್ಟ್ ಹಾಗೂ ಕರ್ನಾಟಕ ಹೈಕೋರ್ಟ್ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ಕನ್ನಡಿಗ ಎಸ್. ಅಬ್ದುಲ್ ನಜೀರ್ ಅವರನ್ನು ಆಂಧ್ರ ಪ್ರದೇಶದ ನೂತನ ರಾಜ್ಯಪಾಲರಾಗಿ ನೇಮಕ ಮಾಡಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ಗಣ್ಯರು ಅವರಿಗೆ ಶುಭಾಶಯ ಕೋರಿದ್ದಾರೆ. ಮೂಲತಃ ಮಂಗಳೂರಿನ ಬೆಳುವಾಯಿಯವರಾದ ಇವರು ಕರ್ನಾಟಕದ ಉಚ್ಛ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿ, ನಂತರ ಸುಪ್ರಿಂ ಕೋರ್ಟ್ ನಲ್ಲಿ ನ್ಯಾಯಾಧೀಶರಾಗಿ, ನಿವೃತ್ತರಾಗಿದ್ದರು.

ಏರ್ ಏಷ್ಯಾಗೆ ರೂ. ೨೦ ಲಕ್ಷ ದಂಡ ವಿಧಿಸಿದ ಡಿಜಿಸಿಎ

ನವದೆಹಲಿ, ಫೆ. ೧೨: ಪೈಲಟ್ ತರಬೇತಿ ನಿಯಮಗಳನ್ನು ಸರಿಯಾಗಿ ಪಾಲಿಸದ ಏರ್ ಏಷ್ಯಾಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ೨೦ ಲಕ್ಷ ದಂಡ ವಿಧಿಸಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯವು ೨೦೨೨ರ ನವೆಂಬರ್ ೨೩ ಮತ್ತು ನವೆಂಬರ್ ೨೫ರ ನಡುವೆ ಏರ್ ಲೈನ್ ಪೈಲಟ್‌ಗಳ ತರಬೇತಿಯನ್ನು ಸಹ ಪರೀಕ್ಷಿಸಿತ್ತು. ಬಳಿಕ ಕಂಪೆನಿಗೆ ಈ ದಂಡ ವಿಧಿಸಲಾಗಿದೆ. ಇದಲ್ಲದೇ, ಪಾಯಲ್ ತರಬೇತಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಡಿಜಿಸಿಎ ಏರ್‌ಲೈನ್‌ನ ಪರೀಕ್ಷಕರಿಗೆ ದಂಡ ವಿಧಿಸಿದೆ. ತಪಾಸಣೆ ವೇಳೆ ಬೆಳಕಿಗೆ ಬಂದ ಪೈಲಟ್ ತರಬೇತಿ ನಿಯಮಗಳ ಉಲ್ಲಂಘನೆಗಾಗಿ ಏರ್ ಏಷ್ಯಾದ ಎಂಟು ಪರೀಕ್ಷಕರಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತಲಾ ಮೂರು ಲಕ್ಷ ರೂಪಾಯಿ ದಂಡ ವಿಧಿಸಿದೆ. ನಾಗರಿಕ ವಿಮಾನಯಾನ ನಿಯಂತ್ರಕವು ಟಾಟಾ ಗ್ರೂಪ್ ಒಡೆತನದ ಏರ್‌ಲೈನ್ ಏರ್ ಏಷ್ಯಾದ ಪೈಲಟ್ ತರಬೇತಿ ಮುಖ್ಯಸ್ಥರನ್ನು ಮೂರು ತಿಂಗಳ ಕಾಲ ಅಮಾನತುಗೊಳಿಸಿದೆ ಎಂದು ಡಿಜಿಸಿಎ ಪ್ರಕಟಣೆ ತಿಳಿಸಿದೆ.

ಮಕ್ಕಳಿಬ್ಬರ ಕತ್ತು ಹಿಸುಕಿ ಕೊಂದು ತಂದೆ!

ರಾಯಚೂರು, ಫೆ. ೧೨: ಪತ್ನಿಯ ನಡತೆ ಬಗ್ಗೆ ಅನುಮಾನದ ಕಣ್ಣುಗಳಿಂದ ನೋಡುತ್ತಿದ್ದ ವ್ಯಕ್ತಿಯೋರ್ವ ತನ್ನಿಬ್ಬರು ಮಕ್ಕಳ ಕತ್ತು ಹಿಸುಕಿ ಕೊಂದಿರುವ ದಾರುಣ ಘಟನೆ ರಾಯಚೂರಿನಲ್ಲಿ ನಡೆದಿದೆ. ದೇವದುರ್ಗದ ಜಕ್ಲೇರದೊಡ್ಡಿಯಲ್ಲಿ ಈ ಘಟನೆ ನಡೆದಿದ್ದು ಹತ್ಯೆಗೀಡಾದ ಮಕ್ಕಳನ್ನು ೫ ವರ್ಷದ ಶಿವರಾಜ್ ಮತ್ತು ೩ ವರ್ಷದ ರಾಘವೇಂದ್ರ ಎಂದು ಗುರುತಿಸಲಾಗಿದೆ. ಪತ್ನಿಯೊಂದಿಗೆ ಜಗಳವಾಡಿದ್ದ ಪತಿ ನಿಂಗಪ್ಪ ಎಂಬಾತ ಅತ್ತೆಯ ಮನೆಯಲ್ಲಿದ್ದ ಮಕ್ಕಳನ್ನು ಕರೆತಂದು ಕತ್ತು ಹಿಸುಕಿ ಕೊಂದಿದ್ದಾನೆ. ಪತ್ನಿ ಅನೈತಿಕ ಸಂಬAಧ ಹೊಂದಿದ್ದಾಳೆ ಎಂದು ಆರೋಪಿಸಿ ನಿಂಗಪ್ಪ ದಿನ ನಿತ್ಯ ಜಗಳವಾಡುತ್ತಿದ್ದ ಇದರಿಂದ ಬೇಸತ್ತ ಮಹಿಳೆ ಗಂಡನಿAದ ದೂರವಾಗಿದ್ದಳು. ಕೊಲೆ ಪ್ರಕರಣ ಸಂಬAಧ ಆರೋಪಿ ನಿಂಗಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು

ಮಂಗಳೂರು, ಫೆ. ೧೨: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಪಯಸ್ವಿನಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ಭಾನುವಾರ ತಿಳಿಸಿವೆ. ಮೃತರು ಪುತ್ತೂರಿನವರು. ಆರು ಯುವಕರು ಈಜಲು ಗುಂಪಿನಲ್ಲಿ ಬಂದಿದ್ದರು ಎಂದು ಮೂಲಗಳು ತಿಳಿಸಿವೆ. ಮೊದಲು ಹೋದವರಲ್ಲಿ ಒಬ್ಬರು ಸುಳಿಗೆ ಸಿಲುಕಿದ್ದಾರೆ ಮತ್ತು ಇತರರು ಆತನನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ನಾಲ್ವರು ದಡ ತಲುಪಲು ಯಶಸ್ವಿಯಾಗಿದ್ದು, ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಸ್ಥಳೀಯ ಯುವಕರು ಇಬ್ಬರು ಯುವಕರ ಮೃತದೇಹಗಳನ್ನು ನದಿಯಿಂದ ಹೊರತೆಗೆದಿದ್ದಾರೆ. ಎಲ್ಲಾ ಆರು ಯುವಕರು ದಿನಗೂಲಿ ಕಾರ್ಮಿಕರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವ್ಯಕ್ತಿಯನ್ನು ಥಳಿಸಿ, ಸುಟ್ಟು ಹಾಕಿದ ಮೂಲಭೂತವಾದಿಗಳು!

ಪಾಕಿಸ್ತಾನ, ಫೆ. ೧೨: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಂಕಾನಾ ಸಾಹಿಬ್ ಜಿಲ್ಲೆಯಲ್ಲಿ ಧರ್ಮನಿಂದೆಯ ಆರೋಪದ ಮೇಲೆ ಹಿಂಸಾತ್ಮಕ ಗುಂಪೊAದು ವ್ಯಕ್ತಿಯೊಬ್ಬನನ್ನು ಸಾರ್ವಜನಿಕವಾಗಿ ಥಳಿಸಿ ಕೊಂದಿದೆ. ನಂಕಾನಾ ಸಾಹಿಬ್‌ನ ವಾರ್ಬರ್ಟನ್ ತಹಸಿಲ್‌ನಲ್ಲಿ ಈ ಘಟನೆ ನಡೆದಿದೆ. ಮೂಲಭೂತವಾದಿಗಳಿಂದ ಹತ್ಯೆಗೀಡಾದ ವ್ಯಕ್ತಿ ಮೇಲೆ ಕುರಾನ್‌ಗೆ ಅವಮಾನ ಮಾಡಿದ ಆರೋಪ ಹೊರಿಸಲಾಗಿತ್ತು. ಪಾಕಿಸ್ತಾನಿ ಪೊಲೀಸರ ಪ್ರಕಾರ ಮೃತ ವ್ಯಕ್ತಿಯ ಹೆಸರು ವಾರಿಸ್ ಎನ್ನಲಾಗಿದೆ.

ಐಸಿಸಿ ಮಹಿಳಾ ಟಿ೨೦ ವಿಶ್ವಕಪ್: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಜಯ

ಕೇಪ್ಟೌನ್, ಫೆ. ೧೨: ಐಸಿಸಿ ಮಹಿಳಾ ಟಿ೨೦ ವಿಶ್ವಕಪ್ ಟೂರ್ನಿಯ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ೭ ವಿಕೆಟ್‌ಗಳ ಅಂತರದಲ್ಲಿ ಮಣಿಸಿದೆ. ದಕ್ಷಿಣ ಆಫ್ರಿಕಾದ ಕೇಪ್ಟೌನ್‌ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ ೧೫೦ ರನ್‌ಗಳ ಸವಾಲಿನ ಗುರಿಯನ್ನು ಭಾರತ ಮಹಿಳಾ ತಂಡ ಕೇವಲ ೧೯ ಓವರ್‌ಗಳಲ್ಲಿ ಕೇವಲ ೩ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದೆ.