(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಪಟ-ಪಟನೇ ಮಾತು, ಯಾವುದೇ ಭಯವಿಲ್ಲದೇ ವೇದಿಕೆಯಲ್ಲಿ ನಿಂತು ಮಾತನಾಡುವ ಶೈಲಿ ನೋಡಿದರೆ ಎಲ್ಲರೂ ನಿಬ್ಬೆರಗಾಗಿ ಬಿಡುತ್ತಾರೆ. ಪುಟ್ಟ ಬಾಲಕಿಯ ಭಾಷಣ ಕೇಳುವಾಗ ಇಡೀ ವೇದಿಕೆ ನಿಶಬ್ಧವಾಗಿ ಬಿಡುತ್ತದೆ. ಈ ಬಾಲಕಿಯ ಹೆಸರು ಶ್ರೀಶಾ, ಕೇವಲ ೧೨ ವರ್ಷದ ಬಾಲಕಿ ತನ್ನ ಭಾಷಣದ ಮೂಲಕ ಇಡೀ ಜಿಲ್ಲೆಯ ಜನರ ಮನ ಗೆಲ್ಲುತ್ತಿದ್ದಾಳೆ.
ಯಾವುದೇ ವಿಷಯ ನೀಡಿದರು ಸಹಾ ಮಾತನಾಡಬಲ್ಲಳು. ಮಾತಿನ ಶೈಲಿಯ ಮುಖಾಂತರ ಎಲ್ಲರನ್ನೂ ಬೆರಗುಗಣ್ಣಿನಿಂದ ನೋಡುವಂತೆ ಮಾಡುತ್ತಾಳೆ. ಸ್ವಾತಂತ್ರö್ಯ ದಿನಾಚರಣೆ, ಗಣರಾಜ್ಯೋತ್ಸವ, ಶಿಕ್ಷಕರ ದಿನ, ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ, ಕನ್ನಡ ರಾಜ್ಯೋತ್ಸವ, ಸ್ವಾಮಿವಿವೇಕಾನಂದ ಜಯಂತಿ, ಭಗತ್ಸಿಂಗ್ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಶಾ ಮಾತನಾಡಿದ್ದಾಳೆ.
ಜಿಲ್ಲಾಡಳಿತ, ತಾಲೂಕು ಪಂಚಾಯತ್, ರಾಷ್ಟಿçÃಯ ಹಬ್ಬಗಳ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರ್ತಿಯಾಗಿಯೂ ಭಾಗವಹಿಸಿದ್ದಾಳೆ.
ಹುಟ್ಟಿದ್ದು ಜನವರಿ ೪, ಬರ್ತ್ ಡೇ ಆಚರಣೆ ಫೆಬ್ರವರಿ ೧೪!
ಶ್ರೀಶಾ ಅತೀ ಹೆಚ್ಚಾಗಿ ಕಾರ್ಯಕ್ರಮಗಳಲ್ಲಿ ಮಾತನಾಡುವುದು ಭಾರತ ದೇಶದ ಯೋಧರ ಬಗ್ಗೆ. ದೇಶದ ಗಡಿ ಕಾಯುವ ಯೋಧರ ಬಗ್ಗೆ ಅಪಾರ ಕಾಳಜಿ, ಪ್ರೀತಿಯನ್ನು ಹೊಂದಿದ್ದಾಳೆ ಬಾಲಕಿ ಶ್ರೀಶಾ. ಯಾವುದೇ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ಶ್ರೀಶಾ ಸೇನಾ ವಸ್ತçವನ್ನೇ ಧರಿಸಿಕೊಂಡು ಮಾತನಾಡುತ್ತಾಳೆ.
ಜನವರಿ ೪, ೨೦೧೧ ರಂದು ಸುಂಟಿಕೊಪ್ಪ ನಿವಾಸಿ ಟೈಲರ್ ವೃತ್ತಿಯಲ್ಲಿ ತೊಡಗಿಕೊಂಡಿರುವ ಶ್ರೀಜು ಹಾಗೂ ಹರದೂರು ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಪಾಲಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಂಧ್ಯಾ ದಂಪತಿ ಪುತ್ರಿಯಾಗಿ ಜನಿಸಿದಳು. ಆದರೆ ವಿಶೇಷವೇನೆಂದರೆ ಕಳೆದ ಮೂರು ವರ್ಷಗಳಿಂದ ಶ್ರೀಶಾ ತನ್ನ ಹುಟ್ಟು ಹಬ್ಬವನ್ನು ಜನವರಿ ೪ ಬದಲು ಫೆಬ್ರವರಿ ೧೪ ರಂದು ಆಚರಿಸುತ್ತಿದ್ದಾಳೆ.
ಫೆಬ್ರವರಿ ೧೪ ಎಲ್ಲರಿಗೂ ತಿಳಿದಿರುವ ಹಾಗೆ ಪ್ರೇಮಿಗಳ ದಿನ. ಆ ದಿನವೇ ೨೦೧೯ರಲ್ಲಿ ಇಡೀ ದೇಶವನ್ನು ತಲ್ಲಣಗೊಳಿಸುವ ರೀತಿಯಲ್ಲಿ ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಗೆ ಭಾರತದ ೪೦ ಯೋಧರು ಹುತಾತ್ಮರಾದರು. ೨೦೨೦ ರಿಂದ ಶ್ರೀಶಾ ಅನಾಥಾಶ್ರಮದಲ್ಲಿ, ಪುಲ್ವಾಮದಲ್ಲಿ ಹುತಾತ್ಮರಾದ ನಲ್ವತ್ತು ಯೋಧರಿಗೆ ನಮಸ್ಕರಿಸಿ, ಅನಾಥಾಶ್ರಮದಲ್ಲಿರುವ ಹಿರಿಯರೊಂದಿಗೆ ಹುಟ್ಟು ಹಬ್ಬವನ್ನು ಆಚರಿಸಿ ಎಲ್ಲರಿಗೂ ಮಾದರಿಯಾಗಿದ್ದಾಳೆ.
ಒಂದೇ ನಿಮಿಷದಲ್ಲಿ ಹೇಳುತ್ತಾಳೆ ಹುತಾತ್ಮ ಯೋಧರ ಹೆಸರು!
ಪ್ರತಿದಿನ ಮಕ್ಕಳು ಶಾಲೆಗೆ ಹೊರಡುವಾಗ, ಹಿರಿಯರು ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ತನ್ನಿಷ್ಟದ ದೇವನಿಗೆ ನಮಸ್ಕರಿಸಿ ಹೋಗುತ್ತಾರೆ. ಆದರೆ ದೇವರ ಫೋಟೋ ಪಕ್ಕದಲ್ಲೇ ಪುಲ್ವಾಮದಲ್ಲಿ ಹುತಾತ್ಮರಾದ ೪೦ ಯೋಧರ ಫೋಟೋವನ್ನು ಶ್ರೀಶಾ ಇಟ್ಟಿದ್ದಾಳೆ. ದೇವರೊಂದಿಗೆ, ೪೦ ಯೋಧರಿಗೆ ಹೂ ಇಟ್ಟು ನಮಸ್ಕರಿಸಿ ಶಾಲೆಗೆ ತೆರಳುತ್ತಾಳೆ. ಬಹುತೇಕರು ಪುಲ್ವಾಮ ದಾಳಿಯ ದಿನವನ್ನು ಕೇವಲ ಫೆಬ್ರವರಿ ೧೪ ರಂದು ನೆನಪಿಸಿಕೊಳ್ಳುತ್ತಾರೆ.
ಪುಟ್ಟ ಬಾಲಕಿ ಶ್ರೀಶಾ ಪ್ರತಿನಿತ್ಯ ಯೋಧರಿಗೆ ನಮಸ್ಕರಿಸಿ ನೈಜ ದೇಶಪ್ರೇಮವೇನೆಂದು ಯೋಧರ ನಾಡಿನ ಜನತೆಗೆ ಸಾರುತ್ತಿದ್ದಾಳೆ. ಪುಲ್ವಾಮದಲ್ಲಿ ಹುತಾತ್ಮರಾದ ೪೦ ಯೋಧರ ಹೆಸರು ನಮ್ಮನ್ನಾಳುವ ಸರ್ಕಾರಕ್ಕೆ, ಜನಪ್ರತಿನಿಧಿಗಳು ಮರೆತಿರುತ್ತಾರೆ. ಆದರೆ ಶ್ರೀಶಾ ಎಂಬ ಪುಟ್ಟ ಬಾಲಕಿ ಕೇವಲ ಒಂದೇ ನಿಮಿಷದಲ್ಲಿ ೪೦ ಯೋಧರ ಹೆಸರು ಹಾಗೂ ಅವರ ಊರಿನ ಹೆಸರನ್ನು ಪಟ-ಪಟನೇ ಹೇಳುತ್ತಾಳೆ. ಅದಲ್ಲದೇ ಚೀನಾ ಗಡಿ ಲಡಾಖ್ ಹಾಗೂ ಛತ್ತೀಸ್ಗಢದಲ್ಲಿ ನಕ್ಸಲ್ ದಾಳಿಗೆ ಹುತಾತ್ಮರಾದವರ ಹೆಸರು, ಹುಟ್ಟೂರು ಎಲ್ಲವನ್ನೂ ಕ್ಷಣಾರ್ಧದಲ್ಲೇ ಹೇಳುತ್ತಾಳೆ ಶ್ರೀಶಾ.
ಸ್ವಂತ ಹಣದಲ್ಲೇ ಹುಟ್ಟು ಹಬ್ಬ ಆಚರಣೆ!
‘ಬರ್ತ್ ಡೇ’ ಹೆಸರಿನಲ್ಲಿ ಕೇವಲ ಒಂದೇ ದಿನದಲ್ಲಿ ಮೋಜು ಮಸ್ತಿ ಮಾಡಿ ಲಕ್ಷಾಂತರ ರೂ ಅನವಶ್ಯಕವಾಗಿ ಪೋಲು ಮಾಡುವ ಯುವ ಸಮೂಹವನ್ನು ನಾವು ನೋಡಿದ್ದೇವೆ. ವಿವಿಧ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ತನಗೆ ಸಿಗುವ ಗೌರವಧನ ಹಾಗೂ ಕುಟುಂಬದವರು, ತಂದೆ-ತಾಯಿ ನೀಡಿದ ಹಣವನ್ನು ಡಬ್ಬಿಯಲ್ಲಿ ಸಂಗ್ರಹಿಸಿ ಅದೇ ಹಣದಲ್ಲಿ ಶ್ರೀಶಾ ಅನಾಥಾಶ್ರಮದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿ ಇಡೀ ಯುವ ಸಮೂಹಕ್ಕೆ ಮಾದರಿಯಾಗಿದ್ದಾಳೆ.
ಸುಂಟಿಕೊಪ್ಪ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ೭ ನೇ ತರಗತಿಯಲ್ಲಿ ವಿದ್ಯಾರ್ಥಿಯಾಗಿರುವ ಶ್ರೀಶಾ ಕೇವಲ ಭಾಷಣದಲ್ಲಿ ಮಾತ್ರವಲ್ಲದೆ, ಚಿತ್ರ ಕಲೆ, ನೃತ್ಯ, ಆಟೋಟ ಸ್ಪರ್ಧೆ, ಗಾಯನ ಸ್ಪರ್ಧೆಯಲ್ಲೂ ಎತ್ತಿದ ಕೈ. ಪುಟ್ಟ ಬಾಲಕಿಯ ಪ್ರತಿಭೆಯನ್ನು ಗುರುತಿಸಿ ಜಿಲ್ಲೆಯ ೬೦ ಕ್ಕೂ ಹೆಚ್ಚು ಸಂಘಸAಸ್ಥೆಗಳು ಸನ್ಮಾನಿಸಿವೆ. ಅದಲ್ಲದೇ ಈಕೆಯ ಭಾಷಣದ ಶೈಲಿಗೆ ಸ್ವತಃ ಈ ಹಿಂದೆ ಕೊಡಗು ಜಿಲ್ಲಾಧಿಕಾರಿಯಾಗಿದ್ದ ಚಾರುಲತಾ ಸೋಮಲ್ ಬೆರಗಾಗಿ ಸನ್ಮಾನಿಸಿದ್ದರು. ಪುಟ್ಟ ಬಾಲಕಿಯ ದೇಶಪ್ರೇಮ, ಪಟ-ಪಟನೇ ಮಾತನಾಡುವ ಶೈಲಿಗೆ, ಇನ್ನೂ ಅನೇಕ ಕಾರ್ಯಕ್ರಮದಲ್ಲಿ ವೇದಿಕೆಯನ್ನು ನೀಡಿ, ಪ್ರತಿಭೆಯನ್ನು ಮತ್ತಷ್ಟು ಪ್ರೋತ್ಸಾಹಿಸಬೇಕಾಗಿದೆ.