ವರದಿ: ಚಂದ್ರಮೋಹನ್
ಕುಶಾಲನಗರ, ಫೆ. ೯: ಬೆಂಗಳೂರು -ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣಗೊಂಡ ಬೆನ್ನಲ್ಲೇ ಮೈಸೂರು-ಕುಶಾಲನಗರ ಹೆದ್ದಾರಿ ಅಗಲೀಕರಣಕ್ಕೆ ಕೇಂದ್ರ ರಸ್ತೆ ಸಾರಿಗೆ ಇಲಾಖೆ ಅನುಮೋದನೆ ನೀಡಿದೆ.
ರಾಷ್ಟಿçÃಯ ಹೆದ್ದಾರಿ ೨೭೫ ರ ಶ್ರೀರಂಗಪಟ್ಟಣ- ಕುಶಾಲನಗರ ಭಾಗದ ತನಕ ನಾಲ್ಕುಪಥ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಗೆ ಕೊಡಗು -ಮೈಸೂರು ಸಂಸದ ಪ್ರತಾಪ್ ಸಿಂಹ ರೂ. ೪ ಸಾವಿರ ಕೋಟಿ ವೆಚ್ಚದ ಅನುದಾನ ನೀಡುವಂತೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಹಲವು ಭಾರಿ ಮನವಿ ಮಾಡಿದ್ದರು. ಇದೀಗ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮನವಿಗೆ ಸ್ಪಂದಿಸುವ ಮೂಲಕ ಸರ್ಕಾರದಿಂದ ಹಲವು ಹೆದ್ದಾರಿಗಳಿಗೆ ಅನುದಾನ ಘೋಷಣೆ ಮಾಡುವುದರೊಂದಿಗೆ ಮೈಸೂರು-ಕುಶಾಲನಗರ ರಸ್ತೆ ಅಗಲೀಕರಣಕ್ಕೆ ೯೦೯.೮೬ ಕೋಟಿ ರೂ.ಗಳ ಮೊದಲ ಹಂತದ ಅನುದಾನ ಘೋಷಣೆ ಮಾಡಿದ್ದಾರೆ.
ರಾಜ್ಯದಲ್ಲಿ ವಿಶ್ವ ದರ್ಜೆಯ ರಾಷ್ಟಿçÃಯ ಹೆದ್ದಾರಿ ಯೋಜನೆಗಳಿಗೆ ಒಟ್ಟು ರೂ. ೩೫೮೨ ಕೋಟಿ ಅನುದಾನ ಕಲ್ಪಿಸಲಾಗಿದೆ. ಶ್ರೀರಂಗಪಟ್ಟಣದಿAದ ಕುಶಾಲನಗರ ಆನೆಕಾಡು ತನಕ ಪ್ರಥಮ ಹಂತದಲ್ಲಿ ಸುಸಜ್ಜಿತ ನಾಲ್ಕು ಲೇನ್ಗಳ ರಸ್ತೆ ನಿರ್ಮಾಣವಾಗಲಿದ್ದು, ಈ ಹೆದ್ದಾರಿ ರಸ್ತೆ ಪ್ರಮುಖ ಪಟ್ಟಣಗಳ ಹೊರವಲಯಗಳ ಮೂಲಕ ಸಾಗಲಿದೆ. ಇಲವಾಲ, ಹುಣಸೂರು, ಪಿರಿಯಾಪಟ್ಟಣ, ಕುಶಾಲನಗರ ಪಟ್ಟಣಗಳಿಗೆ ಬೈಪಾಸ್ ಮೂಲಕ ರಸ್ತೆ ನಿರ್ಮಾಣವಾಗಲಿದ್ದು, ಕುಶಾಲನಗರ ಸಮೀಪ ಬೈಲುಕೊಪ್ಪೆ, ಮಂಚದೇವನಹಳ್ಳಿ ಬಳಿಯಿಂದ ಟಿಬೇಟಿಯನ್ ನಿರಾಶ್ರಿತ ಶಿಬಿರದ ಮಾರ್ಗವಾಗಿ ರಾಣಿಗೇಟ್ ಮೂಲಕ ಕೊಡಗು ಜಿಲ್ಲೆಗೆ ಸಂಪರ್ಕ ಕಲ್ಪಿಸಲಾಗುತ್ತದೆ.
ಈಗಾಗಲೇ ಎಲ್ಲಾ ಹಂತಗಳ ಸರ್ವೇ ಕಾರ್ಯ ನಡೆದಿದ್ದು, ಭೂಮಿ ವಶಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಬೈಲುಕೊಪ್ಪೆ ಟಿಬೇಟಿಯನ್ ನಿರಾಶ್ರಿತ ಶಿಬಿರದ ನೂರಕ್ಕೂ ಅಧಿಕ ಮನೆಗಳು ಹೆದ್ದಾರಿ ನಿರ್ಮಾಣದ ಸಂದರ್ಭ ಸ್ಥಳಾಂತರಗೊಳ್ಳಲಿದ್ದು, ಈ ಬಗ್ಗೆ ಕೇಂದ್ರ ಒಪ್ಪಿಗೆ ನೀಡಿದೆ. ಕಾವೇರಿ ನದಿಗೆ ಅಡ್ಡಲಾಗಿ ನೂತನ ಸೇತುವೆ ನಿರ್ಮಾಣದೊಂದಿಗೆ ಗುಡ್ಡೆಹೊಸೂರು ಸಮೀಪದ ತೂಗುಸೇತುವೆ ಬಳಿ ರಾಜ್ಯ ಹೆದ್ದಾರಿಗೆ ಸೇರಲಿದೆ. ಅಲ್ಲಿಂದ ಬಸವನಹಳ್ಳಿ ಸಮೀಪ ಆನೆಕಾಡು ಬಳಿ ಮಡಿಕೇರಿ ರಸ್ತೆಗೆ ಸಂಪರ್ಕ ಕಲ್ಪಿಸುವುದರೊಂದಿಗೆ ಪ್ರಥಮ ಹಂತದ ನಾಲ್ಕು ಪಥದ ರಸ್ತೆ ಕಾಮಗಾರಿಗೆ ಸದ್ಯದಲ್ಲಿಯೇ ಚಾಲನೆ ದೊರೆಯಲಿದೆ.
ಒಟ್ಟು ೧೧೬ ಕಿ.ಮೀ. ಉದ್ದ ಹಾಗೂ ೧೪ ಮೀಟರ್ ಅಗಲದ ೪ ಪಥದ ಈ ಹೆದ್ದಾರಿಯು ಶ್ರೀರಂಗಪಟ್ಟಣ ಸಮೀಪ ಪಶ್ಚಿಮ ವಾಹಿನಿ ಮತ್ತು ನಗುವನ ಹಳ್ಳಿ ನಡುವೆ ಬೆಂಗಳೂರು-ಮೈಸೂರು ಹೆದ್ದಾರಿಯಿಂದ ತಿರುವು ಪಡೆದು (ಇಲವಾಲ ರಸ್ತೆ) ಹುಣಸೂರು ಸಮೀಪ ಗೋಣಿಕೊಪ್ಪಲಿಗೆ ಹೋಗುವ ಸಂಪರ್ಕ ರಸ್ತೆ ಬಳಿ ಕೂಡುತ್ತದೆ. ಮುಂದೆ ಕಲ್ಲುಬೆಟ್ಟ, ಕಂಪಲಾಪುರ, ಬೈಲಕುಪ್ಪೆ, ಕೊಪ್ಪ, ಕುಶಾಲನಗರ, ಸುಂಟಿಕೊಪ್ಪ ಮೂಲಕ ಮಡಿಕೇರಿ ಸಂಪರ್ಕಿಸುತ್ತದೆ. ಮಧ್ಯೆ ಬರುವ ಪಟ್ಟಣಗಳು, ಹೋಬಳಿ ಕೇಂದ್ರಗಳ ಹೊರ ಭಾಗದಲ್ಲಿ ಬೈಪಾಸ್ ರಸ್ತೆಯಾಗುವುದರಿಂದ ಯಾವದೇ ಅಡೆ-ತಡೆಯಿಲ್ಲದೆ ವಾಹನಗಳು ಅದೇ ವೇಗದಲ್ಲಿ ಚಲಿಸಬಹುದಾಗಿದೆ.
ಈ ಯೋಜನೆಗೆ ಸುಮಾರು ೫೧೬ ಹೆಕ್ಟೇರ್ ಭೂಮಿ ಅಗತ್ಯವಿದ್ದು, ಸರಕಾರಿ ಜಮೀನು ಹಾಗೂ ಬಳಸಿಕೊಳ್ಳಬಹುದಾದ ಪ್ರಸ್ತುತ ಹೆದ್ದಾರಿಯನ್ನು ಹೊರತುಪಡಿಸಿ ಉಳಿದಂತೆ ಖಾಸಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಭಾರತ ರಾಷ್ಟಿçÃಯ ಹೆದ್ದಾರಿಗಳ ಪ್ರಾಧಿಕಾರ ರೂ. ೬ ಸಾವಿರ ಕೋಟಿಗಳ ಪರಿಹಾರ ಕೊಡಬೇಕಾಗಬಹುದೆಂದು ಅಂದಾಜಿಸಿದೆ.