ಆಟೋಗೆ ಟ್ರಕ್ ಡಿಕ್ಕಿ, ಏಳು ಶಾಲಾ ಮಕ್ಕಳು ಸಾವು
ರಾಯ್ಪುರ, ಫೆ. ೯: ರಾಯ್ಪುರದಿಂದ ದಕ್ಷಿಣಕ್ಕೆ ೨೦೦ ಕಿ.ಮೀ. ದೂರದಲ್ಲಿರುವ ಕಂಕೇರ್ ಜಿಲ್ಲೆಯ ಭಾನುಪ್ರತಾಪುರದಲ್ಲಿ ಗುರುವಾರ ಮಧ್ಯಾಹ್ನ ಆಟೋಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಏಳು ಶಾಲಾ ಮಕ್ಕಳು ಸಾವನ್ನಪ್ಪಿದ್ದಾರೆ. ಓರ್ವ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದೆ. ಕೋರೇರ್-ಭಾನುಪ್ರತಾಪುರ ಮಾರ್ಗದಲ್ಲಿ ಶಾಲಾ ಮಕ್ಕಳು ಆಟೋ ರಿಕ್ಷಾದಲ್ಲಿ ಮನೆಗೆ ಮರಳುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. ಐವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಆಟೋ-ರಿಕ್ಷಾ ಬಹುಶಃ ತಪ್ಪು ದಿಕ್ಕಿನಲ್ಲಿ ಹಠಾತ್ ತಿರುವು ತೆಗೆದುಕೊಂಡಿದೆ. ಈ ವೇಳೆ ಎದುರಿನಿಂದ ಬಂದ ಟ್ರಕ್ ಅದಕ್ಕೆ ಡಿಕ್ಕಿ ಹೊಡೆದಿದೆ. ಆಟೋದಲ್ಲಿ ಒಟ್ಟು ಎಂಟು ಮಕ್ಕಳಿದ್ದರು. ಉಳಿದ ಗಾಯಗೊಂಡ ಮಗುವನ್ನು ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ರಾಯ್ಪುರಕ್ಕೆ ಕಳುಹಿಸಲಾಗುವುದು ಎಂದು ಕಂಕೇರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಲಭ್ ಸಿನ್ಹಾ ಅವರು ತಿಳಿಸಿದ್ದಾರೆ. ಅಪಘಾತದ ನಂತರ ಲಾರಿ ಚಾಲಕ ತಲೆಮರೆಸಿಕೊಂಡಿದ್ದಾನೆ. ಶಾಲಾ ಮಕ್ಕಳ ಸಾವಿಗೆ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಸಂತಾಪ ಸೂಚಿಸಿದ್ದು, ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ನೀವೆಲ್ಲ ಸೇರಿದರೂ ನನ್ನೊಬ್ಬನಿಗೆ ಸಮ ಅಲ್ಲ: ಮೋದಿ ಗುಡುಗು
ನವದೆಹಲಿ, ಫೆ. ೯: ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ರೋಷಾವೇಷದಿಂದ ವಾಗ್ದಾಳಿ ನಡೆಸಿದರು. ವಿಪಕ್ಷಗಳು ಎಷ್ಟೇ ಆರೋಪ ಮಾಡಿದರೂ, ಕೆಸರು ಎರಚಿದಷ್ಟೂ ಕಮಲ ಮತ್ತಷ್ಟು ಅರಳುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಇಡೀ ಪ್ರತಿಪಕ್ಷಗಳು ನನ್ನೊಬ್ಬನಿಗೆ ಸಮ ಅಲ್ಲ ಎಂದು ಎದೆ ತಟ್ಟಿಕೊಂಡು ಗುಡುಗಿದರು. ರಾಷ್ಟçಪತಿಗಳ ಭಾಷಣದ ವಂದನಾ ನಿರ್ಣಯದ ಚರ್ಚೆಯ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಒಬ್ಬ ವ್ಯಕ್ತಿ ಹೇಗೆ ಹಲವರನ್ನು ಬಲವಾಗಿ ಎದುರಿಸುತ್ತಿದ್ದಾನೆ ಎಂಬುದನ್ನು ರಾಷ್ಟç ಗಮನಿಸುತ್ತಿದೆ. ವಿರೋಧ ಪಕ್ಷಗಳು ನನ್ನ ವಿರುದ್ಧ ಹೊಸ ಘೋಷಣೆಗಳನ್ನು ಹುಡುಕಬೇಕಿದೆ. ನಾನು ದೇಶಕ್ಕಾಗಿ ಬದುಕುವುದನ್ನು ಮುಂದುವರೆಸುತ್ತೇನೆ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದರು. ತನ್ನನ್ನು ಎದುರಿಸಲಾಗದೆ ರಾಜಕೀಯ ವಿರೋಧಿಗಳು ಆಟವಾಡುತ್ತಿದ್ದಾರೆ ಎಂದು ಆರೋಪಿಸಿದ ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡುತ್ತಾ ಹೋದರು. ಸ್ವಾತಂತ್ರ್ಯ ನಂತರ ದೇಶ ಕಟ್ಟುವಲ್ಲಿ ಜವಹರ್ ಲಾಲ್ ನೆಹರು ಅವರ ಪ್ರಯತ್ನಗಳನ್ನು ಬಿಜೆಪಿ ನಿರ್ಲಕ್ಷಿಸಿದೆ ಎಂಬ ಕಾಂಗ್ರೆಸ್ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಒಂದು ವೇಳೆ ನೆಹರೂ ಅತ್ಯುತ್ತಮ ನಾಯಕರಾದರೆ ಅವರ ತಲೆಮಾರಿನ ಜನರು, ನೆಹರೂ ಅನ್ನು ತಮ್ಮ ಉಪನಾಮವಾಗಿ ಏಕೆ ಇಟ್ಟುಕೊಳ್ಳುವುದಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ, ಭಯ ಮತ್ತು ನಾಚಿಕೆ ಏನು? ಎಂದು ಗಾಂಧಿ ಕುಟುಂಬವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.
ಬೆAಗಳೂರಿನಲ್ಲಿ ೫ ಹೊಸ ಟ್ರಾಫಿಕ್ ಪೊಲೀಸ್ ಠಾಣೆ : ಸಿಎಂ
ಬೆAಗಳೂರು, ಫೆ. ೯: ಬೆಂಗಳೂರಿನಲ್ಲಿ ಹೊಸದಾಗಿ ಐದು ಟ್ರಾಫಿಕ್ ಪೊಲೀಸ್ ಠಾಣೆ ಸ್ಥಾಪಿಸಿ, ಒಬ್ಬರು ಡಿಸಿಪಿ, ಸಿಬ್ಬಂದಿ, ವಾಹನ ಹಾಗೂ ಎಲ್ಲಾ ಸಲಕರಣೆಗಳನ್ನು ಸರ್ಕಾರ ಒದಗಿಸುತ್ತಿದೆ. ವಾಹನ ದಟ್ಟಣೆಯನ್ನು ಸಂಪೂರ್ಣ ನಿಯಂತ್ರಿಸುವ ಉದ್ದೇಶವಿದ್ದು, ೧೨ ಕಾರಿಡಾರ್ ರಸ್ತೆಗಳನ್ನು ಕೂಡ ಹೊಸದಾಗಿ ನಿರ್ಮಿಸುವ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಿದ್ದ ಹೆಚ್.ಎ.ಎಲ್. ವಿಮಾನ ನಿಲ್ದಾಣದ ವಾರ್ಡ್, ಮಹದೇವಪುರ ವಲಯ ವ್ಯಾಪ್ತಿಯಲ್ಲಿನ ಸುರಂಜನ್ ದಾಸ್ ಜಂಕ್ಷನ್ ಬಳಿಯ ಕೆಳಸೇತುವೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಇಂದು ಲೋಕಾರ್ಪಣೆಯಾಗಿರುವ ಕೆಳಸೇತುವೆಯಿಂದಾಗಿ ವೈಟ್ ಫೀಲ್ಡ್ನಿಂದ ಹಿಡಿದು ಎಂ.ಜಿ. ರಸ್ತೆಯವರೆಗೆ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ವಾಹನಗಳು ಇನ್ನು ಮುಂದೆ ಸುಗಮವಾಗಿ ಸಂಚಾರ ಮಾಡಬಹುದಾಗಿದೆ. ಹಿಂದೆ ಒಮ್ಮೆ ಹೆಚ್.ಎ.ಎಲ್ ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ನೋಡಿ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದ ಹಿನ್ನೆಲೆ ಈ ಕೆಲಸವನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಿರುವ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು. ಬೆಂಗಳೂರು ಅತಿ ವೇಗದಲ್ಲಿ ಬೆಳೆಯುತ್ತಿರುವ ನಗರ. ಪ್ರತಿನಿತ್ಯ ೫ ಸಾವಿರ ವಾಹನಗಳು ರಸ್ತೆಗಿಳಿಯುತ್ತವೆ. ಬೆಂಗಳೂರಿನಲ್ಲಿ ಪ್ರತಿ ದಿನ ೧೦ ಲಕ್ಷ ಜನ ಬಂದು ಹೋಗುವವರಿದ್ದಾರೆ. ಇದರ ಪರಿಹಾರಕ್ಕೆ ಹಲವಾರು ದೀರ್ಘಾವಧಿ ಮತ್ತು ಅಲ್ಪಾವಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆ ಇದೆ. ಸಂಚಾರ ಸುಗಮಗೊಳಿಸಲು ಅಮೃತ ನಗರೋತ್ಥಾನದಲ್ಲಿ ೧೧ ಮೇಲ್ಸೇತುವೆಗಳನ್ನು ಕೈಗೊಂಡಿದ್ದು ಅನುಮೋದನೆಯನ್ನೂ ನೀಡಲಾಗಿದೆ. ಬೆಂಗಳೂರಿನ ಇತಿಹಾಸದಲ್ಲಿಯೇ ಒಂದೇ ವರ್ಷ ೧೧ ಮೇಲ್ಸೇತುವೆಗಳಿಗೆ ಅನುಮೋದನೆ ನೀಡಿರುವುದು ಇದೇ ಮೊದಲು ಎಂದು ಹೇಳಿದರು.
ಕಾರ್ಮಿಕರ ಮೇಲೆ ಹರಿದ ಸರ್ಕಾರಿ ಬಸ್; ನಾಲ್ವರು ಸಾವು
ಲಖನೌ, ಫೆ. ೯: ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಯುಪಿಎಸ್ಆರ್ಟಿಸಿ) ಬಸ್ ಬುಧವಾರ ತಡರಾತ್ರಿ ನೋಯ್ಡಾ ಬಳಿಯ ದಾದ್ರಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಖಾನೆಯ ಕಾರ್ಮಿಕರ ಮೇಲೆ ಹರಿದಿದ್ದು, ಭೀಕರ ಅಪಘಾತದಲ್ಲಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಒಟ್ಟು ಏಳು ಮಂದಿಗೆ ಬಸ್ ಡಿಕ್ಕಿ ಹೊಡೆದಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ೧೧.೩೦ ರ ಸುಮಾರಿಗೆ ಈ ಅಪಘಾತ ನಡೆದಿದೆ. ದಾದ್ರಿಯ ಬಾದಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹೀರೋ ಮೋಟಾರ್ಸ್ ಮುಂಭಾಗದ ಜಿಟಿ ರಸ್ತೆಯನ್ನು ದಾಟುತ್ತಿದ್ದಾಗ ನೋಯ್ಡಾ ಡಿಪೋ ಸೇರಿದ ನೋಯ್ಡಾಗೆ ಹೋಗುವ ಬಸ್ ಕಾರ್ಖಾನೆಯ ಕಾರ್ಮಿಕರ ಮೇಲೆ ಹರಿದಿದೆ. ಗಾಯಾಳುಗಳನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಕಮಿಷನರ್(ಸೆಂಟ್ರಲ್ ನೋಯ್ಡಾ) ವಿಶಾಲ್ ಪಾಂಡೆ ಅವರು ತಿಳಿಸಿದ್ದಾರೆ. ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನನ್ನು ಹಿಡಿಯಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಬಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸಂತ್ರಸ್ತರ ಸಂಬAಧಿಕರಿಗೆ ಮಾಹಿತಿ ನೀಡಿದ್ದಾರೆ.
ಹೈಕೋರ್ಟ್ಗಳಲ್ಲಿ ೬೦ ಲಕ್ಷ, ಸುಪ್ರೀಂ ಕೋರ್ಟ್ನಲ್ಲಿ ೬೯ ಸಾವಿರ ಪ್ರಕರಣ ಬಾಕಿ: ಕೇಂದ್ರ ಸರ್ಕಾರ
ನವದೆಹಲಿ, ಫೆ. ೯: ಸುಪ್ರೀಂ ಕೋರ್ಟ್ನಲ್ಲಿ ಸುಮಾರು ೬೯,೦೦೦ ಕೇಸ್ಗಳು ಬಾಕಿಯಿದ್ದರೆ, ದೇಶದ ೨೫ ಹೈಕೋರ್ಟ್ಗಳಲ್ಲಿ ೬೦ ಲಕ್ಷ ಪ್ರಕರಣಗಳು ಇತ್ಯರ್ಥವಾಗಬೇಕಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. ಸುಪ್ರೀಂಕೋರ್ಟ್ ವೆಬ್ಸೈಟ್ನಲ್ಲಿನ ವಿವರಗಳನ್ನು ಉಲ್ಲೇಖಿಸಿ, ಫೆಬ್ರವರಿ ೧ ರವರೆಗೂ ಸುಪ್ರೀಂಕೋರ್ಟ್ನಲ್ಲಿ ಸುಮಾರು ೬೯,೫೧೧ ಕೇಸ್ಗಳು ಬಾಕಿ ಇರುವುದಾಗಿ ಕಾನೂನು ಸಚಿವ ಕಿರಣ್ ರಿಜಿಜು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. ಫೆಬ್ರವರಿ ೧, ೨೦೨೩ ರಂದು ರಾಷ್ಟಿçÃಯ ನ್ಯಾಯಾಂಗ ಮಾಹಿತಿ ಗ್ರೀಡ್(ಎನ್ಜೆಡಿಸಿ)ಯಲ್ಲಿ ಲಭ್ಯವಾದ ಮಾಹಿತಿ ಪ್ರಕಾರ, ದೇಶಾದ್ಯಂತ ಹೈಕೋರ್ಟ್ ಗಳಲ್ಲಿ ೫೯,೮೭,೪೭೭ ಕೇಸ್ಗಳು ಬಾಕಿಯಿವೆ ಎಂದು ಅವರು ತಿಳಿಸಿದರು. ಈ ಪೈಕಿ ದೇಶದ ಅತ್ಯಂತ ದೊಡ್ಡ ಹೈಕೋರ್ಟ್ ಅಲಹಾಬಾದ್ ಹೈಕೋರ್ಟ್ನಲ್ಲಿ ೧೦.೩೦ ಲಕ್ಷ ಕೇಸ್ಗಳು ಬಾಕಿ ಉಳಿದಿವೆ. ಸಿಕ್ಕಿಂ ಹೈಕೋರ್ಟ್ನಲ್ಲಿ ಕನಿಷ್ಟ ೧೭೧ ಕೇಸ್ಗಳು ಬಾಕಿಯಿವೆ. ಬಾಕಿ ಪ್ರಕರಣಗಳ ವಿಲೇವಾರಿಗೆ ಪೂರಕ ವಾತವಾರಣ ನಿರ್ಮಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ರಿಜಿಜು ಸದನಕ್ಕೆ ಮಾಹಿತಿ ನೀಡಿದರು.