ಪೊನ್ನಂಪೇಟೆ, ಫೆ. ೯: ಲೈನ್‌ಮನೆಗಳಲ್ಲಿ ವಾಸವಾಗಿರುವ ಬುಡಕಟ್ಟು ಸಮುದಾಯದ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಬುಡಕಟ್ಟು ಕಾರ್ಮಿಕರ ಸಂಘದ ವತಿಯಿಂದ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಆವರಣದಲ್ಲಿ ಕಳೆದ ಏಳು ತಿಂಗಳಿನಿAದ ನಡೆಯುತ್ತಿದ್ದ ಅಹೋರಾತ್ರಿ ಧರಣಿ ಜಿಲ್ಲಾಡಳಿತ ಜನಪ್ರತಿನಿಧಿಗಳು ಮನ್ನಣೆ ನೀಡದೇ ಇರುವುದರಿಂದ ಪೊನ್ನಂಪೇಟೆ ಐಟಿಡಿಪಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.
ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ೪೫೦೦ಕ್ಕೂ ಹೆಚ್ಚು ಕುಟುಂಬಗಳು ನಿವೇಶನರಹಿತರಾಗಿದ್ದು ಲೈನ್‌ಮನೆಯಲ್ಲಿ ವಾಸಿಸುತ್ತಿರುವವರಿಗೆ ನಿವೇಶನ ನೀಡಲು ಒತ್ತಾಯಿಸಿ ಧರಣಿ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಬುಡಕಟ್ಟು ಕಾರ್ಮಿಕ ಸಂಘದ ಅಧ್ಯಕ್ಷ ವೈ.ಬಿ. ಗಪ್ಪು ಅವರು, ಈಗಾಗಲೇ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಸುಮಾರು ೭೪ ಎಕರೆ ಜಾಗ ಬುಡಕಟ್ಟು ಸಮುದಾಯದ ನಿವೇಶನಕ್ಕಾಗಿ ಕಾಯ್ದಿರಿಸಲಾಗಿದೆ. ಆದರೆ ಇದುವರೆಗೂ ಇಲಾಖೆಯ ಅಧಿಕಾರಿಗಳು ಜಾಗವನ್ನು ವಿಲೇವಾರಿ ಮಾಡಿಲ್ಲ. ನಾವು ಎಕರೆಗಟ್ಟಲೆ ಜಾಗ ಕೇಳುತ್ತಿಲ್ಲ. ವಾಸ ಮಾಡಲು ಒಂದು ಸೂರು ಕಲ್ಪಿಸಿಕೊಡಿ ಎಂದು ಕೇಳುತ್ತಿದ್ದೇವೆ. ಆದರೆ ನಮ್ಮ ಕೂಗು ಅರಣ್ಯರೋಧನವಾಗಿದೆ. ಎಂದು ಆರೋಪಿಸಿದರು.
ಪೊನ್ನಂಪೇಟೆ ತಾಲೂಕಿನಲ್ಲಿ ಒಟ್ಟು ೪೫೬ ಬುಡಕಟ್ಟು ಸಮುದಾಯದ ಕುಟುಂಬಗಳು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಯಾವುದೇ ಕ್ರಮವಾಗಿಲ್ಲ. ಶೀಘ್ರವಾಗಿ ನಿವೇಶನ ಹಕ್ಕುಪತ್ರ ನೀಡದಿದ್ದಲ್ಲಿ ಜಿಲ್ಲೆಯ ಎಲ್ಲಾ ಬುಡಕಟ್ಟು ಸಮುದಾಯದವರನ್ನು ಸೇರಿಸಿಕೊಂಡು ಜಾಥಾ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭ ಸದಸ್ಯರಾದ ಭವ್ಯ, ಪುಷ್ಪ, ರಾಧ, ಮುತ್ತ, ಕೊಟ್ಟ ಇನ್ನಿತರರು ಇದ್ದರು.