ಮಡಿಕೇರಿ, ಫೆ. ೯: ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ತುಳುಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಸ್ತಾನಮಾನ ನೀಡುವುದಾಗಿ ಘೋಷಣೆ ಮಾಡಿದ್ದು, ಇದು ಸ್ವಾಗತಾರ್ಹ; ಅದರಂತೆ ಕೊಡವ ಭಾಷೆಯನ್ನು ಕೂಡ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕೆಂದು ಕರ್ನಾಟಕ ಭಾಷಾ ಅಲ್ಪಸಂಖ್ಯಾತರ ಒಕ್ಕೂಟದ ಅಧ್ಯಕ್ಷ ಪ್ರತೀಕ್ ಪೊನ್ನಣ್ಣ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ಕೊಡವ ಭಾಷೆಗೆ ಲಿಪಿ ಇಲ್ಲ ಎಂದು ವಾದ ಮಾಡಲಾಗುತ್ತಿತ್ತು. ಇದೀಗ ಭಾಗಮಂಡಲ ದೇವಾಲಯದಲ್ಲಿ ದೊರೆತ ಶಾಸನ ಕೊಡವ ಲಿಪಿಯಲ್ಲಿರುವ ಮೊದಲ ಶಾಸನವಾಗಿದೆ. ಇದು ೧೩೭೦ರ ಇಸವಿಯದ್ದಾಗಿದೆ. ನಂತರ ೧೮೮೭ರಲ್ಲಿ ಡಾ. ಕೊರವಂಡ ಅಪ್ಪಯ್ಯ ಅವರು ಒಂದು ಲಿಪಿಯನ್ನು ಬಿಡುಗಡೆ ಮಾಡಿದ್ದಾರೆ. ೧೯೭೦ರಲ್ಲಿ ಸುಮಾರು ೧೨ ಲಿಪಿಗಳನ್ನು ಸಂಶೋಧನೆ ಮಾಡಿ ಡಾ. ಐ.ಮಾ. ಮುತ್ತಣ್ಣ ಅವರು ಕೊಡವ ಭಾಷೆಗೆ ಸರಳವಾದ ಲಿಪಿ ತಯಾರಿಸಿದ್ದಾರೆ. ನಂತರದಲ್ಲಿ ಒಟ್ಟು ಐದು ಕೊಡವ ಲಿಪಿಗಳು ಬಂದಿದ್ದು, ಐ.ಮಾ. ಮುತ್ತಣ್ಣ ಅವರ ಲಿಪಿಯನ್ನು ೨೦೨೨ರ ಫೆ. ೨೧ ರಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಅಧಿಕೃತ ಲಿಪಿ ಎಂದು ಘೋಷಿಸಿದ್ದು, ಅದನ್ನೇ ಒಪ್ಪಿಕೊಂಡು ಬಳಸಲಾಗುತ್ತಿದೆ ಎಂದು ಹೇಳಿದರು.

ಸರಕಾರ ಇದೇ ಲಿಪಿಯನ್ನು ಅಂಗೀಕರಿಸಿ ಎಲ್ಲಾ ವಾಣಿಜ್ಯ ಮಳಿಗೆಗಳು ಮತ್ತು ಅಂಗಡಿಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯೊಂದಿಗೆ ಕೊಡವ ಭಾಷಾ ಲಿಪಿಯನ್ನು ಕೂಡ ಬಳಸಬೇಕು. ಇದರಿಂದಾಗಿ ಕನ್ನಡ ಭಾಷೆಯೊಂದಿಗೆ ಕೊಡವ ಭಾಷೆ ಕೂಡ ಬೆಳವಣಿಗೆ ಕಾಣಲಿದೆ. ಕೊಡವ ಭಾಷೆ ಕೇವಲ ಒಂದು ಜಾತಿ, ಜನಾಂಗಕ್ಕೆ ಸೀಮಿತವಾಗಿಲ್ಲ. ೧೮ ಮೂಲ ನಿವಾಸಿಗಳು ಆಡುವ ಪ್ರಾದೇಶಿಕ ಭಾಷೆಯನ್ನು ಕಡೆಗಣಿಸುತ್ತಿರುವದು ಖಂಡನೀಯ. ಈ ಭಾಷೆಗೂ ಅಧಿಕೃತ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದರು.

ಐದು ವರ್ಷಗಳ ಯೋಜನೆ

ಕೊಡವ ಲಿಪಿ ಸರಳವಾಗಿದ್ದು, ಕೊಡವ ಭಾಷೆಯ ಅಸಲೀಯತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಶಾಲೆ, ಅಂಗನವಾಡಿ, ದೇವಾಲಯ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಕೊಡವ ಲಿಪಿಯ ಭಿತ್ತಿಪತ್ರಗಳನ್ನು ಅಳವಡಿಸಲಾಗುವದು. ಐದು ವರ್ಷಗಳ ಈ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಯಾರ ಮೇಲೆಯೂ ಒತ್ತಡ ಹೇರುವದಿಲ್ಲ. ಎಲ್ಲರೂ ಕಲಿತರೆ ಭಾಷೆ ಬೆಳವಣಿಗೆಯಾಗಲಿದೆ ಎಂದು ಪೊನ್ನಣ್ಣ ಹೇಳಿದರು. ಇತರ ಭಾಷಿಕರು ಕೂಡ ಕೊಡವ ಭಾಷೆಯ ಬೆಳವಣಿಗೆಯಲ್ಲಿ ಸಾಕಷ್ಟು ಕೊಡುಗೆ ನೀಡಿದ್ದು, ಕವಿತೆ, ರಾಷ್ಟçಗೀತೆ ಮುಂತಾದವುಗಳನ್ನು ರಚನೆ ಮಾಡಿದ್ದಾರೆ. ಕೊಡವ ಭಾಷೆ ಕೊಡಗಿನ ಆಸ್ತಿಯಾಗಿದ್ದು, ಬೆಳವಣಿಗೆಗೆ ಎಲ್ಲರೂ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.