(ವಿಶೇಷ ವರದಿ: ಕೆ.ಎಂ. ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಫೆ. ೯: ಚೆಟ್ಟಳ್ಳಿ-ಮಡಿಕೇರಿ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದೀಗ ವಾಹನ ಸವಾರರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಕಿರಿದಾದ ರಸ್ತೆಯ ಬದಿಯಲ್ಲಿ ಖಾಸಗಿ ಕಂಪೆನಿಯವರು ಕೇಬಲ್ ಅಳವಡಿಸಲು ಬೃಹತ್ ಗುಂಡಿಗಳನ್ನು ತೋಡುತ್ತಿದ್ದು, ಕಾಮಗಾರಿ ಆದ ನಂತರ ಗುಂಡಿಗಳನ್ನು ಮುಚ್ಚದೆ ನಿರ್ಲಕ್ಷö್ಯ ವಹಿಸಿದೆ.

ಬುಧವಾರ ಚೆಟ್ಟಳ್ಳಿ-ಮಡಿಕೇರಿ ಸಂಪರ್ಕ ಕಲ್ಪಿಸುವ ರಸ್ತೆಯ ಅಬ್ಯಾಲ ಎಂಬಲ್ಲಿ ಬೈಕ್ ಸವಾರರೊಬ್ಬರು ಅಪಘಾತಕ್ಕೆ ಬಲಿಯಾಗಿದ್ದಾರೆ. ಅಪಘಾತ ಸಂಭವಿಸಿದ ರಸ್ತೆಯ ಬದಿಯಲ್ಲಿ ಕೇಬಲ್ ಅಳವಡಿಸಲು ಗುಂಡಿ ತೋಡುತ್ತಿದ್ದಾರೆ. ಇದರಿಂದ ಕಿರಿದಾದ ರಸ್ತೆಯಲ್ಲಿ ವಾಹನ ಚಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ವಾಹನ ಸವಾರರು ಆಕ್ರೋಶ ಹೊರಹಾಕುತ್ತಿದ್ದಾರೆ. ಸಿದ್ದಾಪುರದಿಂದ-ಮಡಿಕೇರಿ ತಲುಪಲು ಚೆಟ್ಟಳ್ಳಿ ಮುಖ್ಯ ರಸ್ತೆಯಾಗಿದೆ. ಆದರೆ, ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಚೆಟ್ಟಳ್ಳಿ-ಮಡಿಕೇರಿ ರಸ್ತೆಯ ಅವ್ಯವಸ್ಥೆಯನ್ನು ಕೇಳುವವರಿಲ್ಲದಂತಾಗಿದೆ.

ರಸ್ತೆ ಬದಿಯಲ್ಲಿ ಬೃಹತ್ ಮರಗಳು, ಯಾವ ಸಮಯದಲ್ಲಿ ಬೇಕಾದರೂ ಗುಡ್ಡಗಳು ರಸ್ತೆಗೆ ಜಾರಿ ಬೀಳುವ ಭಯ, ಕೊಂಚ ಎಡವಿದರೆ ಪಕ್ಕದಲ್ಲೇ ಇರುವ ಬೃಹತ್ ಕಂದಕದೊಳಗೆ ವಾಹನ ಸವಾರರು ಬೀಳುವ ಆತಂಕದಲ್ಲೇ ವಾಹನ ಚಲಾಯಿಸಬೇಕಾಗಿದೆ. ರಸ್ತೆ ಸಂಪೂರ್ಣ ಗುಂಡಿಗಳಿAದ ಕೂಡಿದೆ. ವರ್ಷವಿಡೀ ಈ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುತ್ತದೆ.

ಲೋಕೋಪಯೋಗಿ ಇಲಾಖೆ ಅಬ್ಯಾಲದಲ್ಲಿ ಮಳೆಗಾಲ ಸಮಯದಲ್ಲಿ ಉಂಟಾದ ಮಣ್ಣು ಕುಸಿತದಿಂದ ರಸ್ತೆಯ ಬದಿಯಲ್ಲಿ ಕಲ್ಲುಗಳಿಂದ ನಿರ್ಮಿಸಿರುವ ತಡೆಗೋಡೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಯಾವ ಸಂದರ್ಭದಲ್ಲೂ ತಡೆಗೋಡೆ ಕುಸಿತಗೊಳ್ಳುವ ಸಾಧ್ಯತೆಯೂ ಇದೆ. ಇದರ ಮಧ್ಯೆ ಕಳೆದ ೨-೩ ವರ್ಷಗಳಿಂದ ಅಬ್ಯಾಲದಿಂದ-ಚೆಟ್ಟಳ್ಳಿವರೆಗೆ ಖಾಸಗಿ ಕಂಪೆನಿಯವರು ಕೇಬಲ್ ಅಳವಡಿಸಲು ಗುಂಡಿಗಳನ್ನು ತೋಡಿ ಗುಂಡಿ ಮುಚ್ಚದೆ ತೆರಳಿರುವುದರಿಂದ ರಸ್ತೆ ಕುಸಿತಗೊಳ್ಳುತ್ತಿದೆ. ಇದೀಗ ಮತ್ತೆ ಕೇಬಲ್ ಅಳವಡಿಸಲು ಬೃಹತ್ ಗುಂಡಿಗಳಿAದ ತೋಡುತ್ತಿದ್ದು, ಚಿಕ್ಕದಾದ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುವಂತಾಗಿದೆ.

ಬ್ಯಾರಿಕೇಡ್ ಇಲ್ಲ! ಎಚ್ಚರಿಕೆ ಫಲಕ ಇಲ್ಲ!

ವಾಹನಗಳು ಸಂಚರಿಸುವ ರಸ್ತೆಯಲ್ಲಿ ಕಾಮಗಾರಿಗಳು ನಡೆಯುವಾಗ ಬ್ಯಾರಿಕೇಡ್ ಹಾಗೂ ಎಚ್ಚರಿಕೆ ಇರುವ ಸೂಚನಾ ಫಲಕ ಅಳವಡಿಸುವುದು ಸಾಮಾನ್ಯ. ಕೆಲ ದಿನಗಳಿಂದ ಅಬ್ಯಾಲ ರಸ್ತೆಯಲ್ಲಿ ನಡೆಯುತ್ತಿರುವ ಕೇಬಲ್ ಅಳವಡಿಸುವ ಕಾಮಗಾರಿಯ ಬಗ್ಗೆ ರಸ್ತೆಯಲ್ಲಿ ಯಾವುದೇ ಎಚ್ಚರಿಕೆ ಫಲಕವಾಗಲಿ, ಬ್ಯಾರಿಕೇಡ್ ಆಗಲಿ ಅಳವಡಿಸಿಲ್ಲ. ಚಿಕ್ಕದಾದ ರಸ್ತೆಯ ಅರ್ಧಭಾಗದಷ್ಟು ಜೆಸಿಬಿಗೆ ಬೇಕಾಗುತ್ತದೆ. ಇದರ ಮಧ್ಯೆ ವಾಹನಗಳು ಸಂಚರಿಸುವುದು ಕಷ್ಟಕರವಾಗಿದೆ.

ಪ್ರತೀ ಬಾರಿ ಮಳೆಗಾಲದಲ್ಲಿ ಮಣ್ಣು ಕುಸಿತಗೊಳ್ಳುತ್ತಿರುವ ಚೆಟ್ಟಳ್ಳಿ-ಮಡಿಕೇರಿ ಮುಖ್ಯರಸ್ತೆಯಲ್ಲಿ ಖಾಸಗಿ ಕಂಪೆನಿಯವರಿಗೆ ಕೇಬಲ್ ಅಳವಡಿಸಲು ಅವಕಾಶ ನೀಡಿದಕ್ಕೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಡೆನ್ನಿಬರೋಸ್ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದಾಪುರ, ಚೆಟ್ಟಳ್ಳಿ ಭಾಗದ ಜನತೆಗೆ ತುರ್ತು ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಗೆ ತೆರಳಲು ಮುಖ್ಯ ರಸ್ತೆ ಇದಾಗಿದ್ದು, ಕಳೆದ ಒಂದು ದಶಕಕ್ಕೂ ಅಧಿಕ ಕಾಲದಿಂದ ಮಡಿಕೇರಿ-ಚೆಟ್ಟಳ್ಳಿ ರಸ್ತೆಯನ್ನು ಜನಪ್ರತಿನಿಧಿಗಳು ನಿರ್ಲಕ್ಷಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಗುಂಡಿಗಳಿAದ ಕೂಡಿದ ಹಾಗೂ ಪಕ್ಕದಲ್ಲೇ ಬೃಹತ್ ಕಂದಕ ಇರುವುದರಿಂದ ಅಬ್ಯಾಲ ರಸ್ತೆಯಲ್ಲಿ ಸಂಚರಿಸಿದರೆ ಸೂಕ್ತ ಸಮಯದಲ್ಲಿ ಆಸ್ಪತ್ರೆ ತಲುಪಲು ಸಾಧ್ಯವಿಲ್ಲ ಎಂದು ಚೆಟ್ಟಳ್ಳಿಯ ಆಟೋ ಚಾಲಕ ಜೋಯಿ ಆತಂಕ ವ್ಯಕ್ತಪಡಿಸಿದರು.

ಪ್ರತಿನಿತ್ಯ ಸಾವಿರಾರು ವಾಹನಗಳು ಈ ರಸ್ತೆಯ ಮುಖಾಂತರ ಮಡಿಕೇರಿ ತಲುಪುತ್ತವೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಡಿಕೇರಿ ತಲುಪುವ ಮುಖ್ಯ ರಸ್ತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಂಚರಿಸಲು ಬಹುತೇಕರು ಹಿಂದೇಟು ಹಾಕುತ್ತಿದ್ದಾರೆ. ರಸ್ತೆಯ ಬದಿಯಲ್ಲಿ ತೋಡಿರುವ ಗುಂಡಿಗಳಿAದ ರಸ್ತೆ ಬಿರುಕು ಬಿಡುತ್ತಿದೆ. ಮಳೆಗಾಲದಲ್ಲಿ ಕೇಬಲ್ ಗುಂಡಿಗಳಿಗೆ ನೀರು ನುಗ್ಗಿ, ಗುಂಡಿಗಳಿಗೆ ವಾಹನ ಸಿಲುಕಿ ಅಪಘಾತಗಳಾಗಿರುವ ಹಲವು ನಿದರ್ಶನಗಳು ಇದ್ದರೂ ಲೋಕೋಪಯೋಗಿ ಇಲಾಖೆ ರಸ್ತೆಯ ಬದಿಯಲ್ಲಿ ಕೇಬಲ್ ಅಳವಡಿಸಲು ಗುಂಡಿಗಳನ್ನು ತೋಡಲು ಅನುಮತಿ ನೀಡಿರುವುದಕ್ಕೆ ಬಸ್ ಚಾಲಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಕತ್ತಲೆಕಾಡು-ಅಬ್ಯಾಲ ತಿರುವಿನಲ್ಲಿ ಕಾಡು ಬೆಳೆದು ನಿಂತಿರುವುದರಿAದ ಬೈಕ್ ಚಾಲಕನೊಬ್ಬ ಅಪಘಾತಕ್ಕೆ ಬಲಿಯಾಗಿದ್ದ. ಇದೀಗ ರಸ್ತೆಯಲ್ಲಿ ಕೇಬಲ್ ಅಳವಡಿಸಲು ಗುಂಡಿಗಳನ್ನು ತೋಡುತ್ತಿರುವುದರಿಂದ ಚಿಕ್ಕದಾದ ರಸ್ತೆಯಲ್ಲಿ ಬದಿಗೆ ಸರಿಯಲು ಮುಂದಾಗಿ, ಅಪಘಾತಕ್ಕೆ ಮತ್ತೊಬ್ಬ ಬೈಕ್ ಸವಾರ ಬಲಿಯಾಗಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆ ಚೆಟ್ಟಳ್ಳಿ-ಮಡಿಕೇರಿ ರಸ್ತೆಯ ಅಭಿವೃದ್ಧಿಗೆ ಮುಂದಾಗಿ, ಕೇಬಲ್ ಅಳವಡಿಸಲು ಗುಂಡಿಗಳನ್ನು ತೋಡಲು ಅನುಮತಿ ನೀಡದೇ ಅಮಾಯಕರ ಜೀವ ಉಳಿಸಬೇಕಾಗಿದೆ.